ಮುಂಬೈ: ಬಾಲಿವುಡ್ನಲ್ಲಿ ಡ್ರಗ್ಸ್ ಸೇವನೆ ಮತ್ತು ನಂಟು ಆರೋಪದಡಿ ಎನ್ಸಿಬಿ ಅಧಿಕಾರಿಗಳು ಹಲವು ಕಡೆ ದಾಳಿ ನಡೆಸಿದ್ದಾರೆ. ಇದೀಗ ಬಾಲಿವುಡ್ ಸಿನಿಮಾ ಮತ್ತು ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳುತ್ತಿದ್ದ ಹಾಸ್ಯ ನಟಿ ಭಾರತಿ ಸಿಂಗ್ ನಿವಾಸದ ಮೇಲೂ ದಾಳಿ ನಡೆಸಲಾಗಿದೆ ಎನ್ನಲಾಗ್ತಿದೆ.
ಡ್ರಗ್ಸ್ ಪ್ರಕರಣ ಸಂಬಂಧ ಹಲವು ಬಾರಿ ದಾಳಿ ನಡೆಸಿರುವ ಎನ್ಸಿಬಿ ಹಲವು ನಟ - ನಟಿಯರ ಮನೆಯಲ್ಲೂ ಹುಡುಕಾಟ ನಡೆಸಿದ್ದಾರೆ ಎನ್ನಲಾಗಿದೆ. ಅಲ್ಲದೇ ನಟಿ ಹಾಗೂ ಆಕೆಯ ಪತಿ ಬ್ಯಾನ್ ಆಗಿರುವ ಔಷಧ ಬಳಕೆ ಮಾಡಿರುವ ಕುರಿತು ಮಾಹಿತಿ ದೊರಕಿದೆ ಎಂದು ಮೂಲಗಳು ತಿಳಿಸಿವೆ.
ಇದಕ್ಕೂ ಮೊದಲು ನಟ ಅರ್ಜುನ್ ರಾಮ್ಪಾಲ್ ಮನೆಯಲ್ಲೂ ಹುಡುಕಾಟ ನಡೆಸಿದ್ದ ಎನ್ಸಿಬಿ ಬಳಿಕ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿತ್ತು. ಬಳಿಕ ವಿಚಾರಣೆಗೆ ಹಾಜರಾಗಿದ್ದ ಅರ್ಜುನ್ಗೆ ಸತತ 6 ಗಂಟೆಗಳ ವಿಚಾರಣೆ ನಡೆಸಲಾಗಿತ್ತು.
ಇದಲ್ಲದೇ ಚಲನಚಿತ್ರ ನಿರ್ಮಾಪಕ ಫಿರೋಜ್ ನಾಡಿಯಾವಾಲಾರನ್ನು ವಿಚಾರಣೆಗೆ ಕರೆಸಲಾಗಿತ್ತು. ಅವರ ಪತ್ನಿ ಶಬಾನಾ ಸಯೀದ್ ವಾಸವಿದ್ದ ಮುಂಬೈ ನಿವಾಸದಲ್ಲಿ 10 ಗ್ರಾಂನಷ್ಟು ಗಾಂಜಾ ದೊರೆತಿದ್ದ ಬಳಿಕ ಅವರನ್ನು ಬಂಧಿಸಲಾಗಿತ್ತು. ಬಳಿಕ ಅವರಿಗೆ ಜಾಮೀನು ನೀಡಲಾಗಿತ್ತು.