ಅಮರಾವತಿ (ಆಂಧ್ರಪ್ರದೇಶ): ವಿಶಾಖಪಟ್ಟಣಂ ಅನಿಲ ಸೋರಿಕೆ ಘಟನೆ ಕುರಿತು ವೈಜ್ಞಾನಿಕ ತನಿಖೆ ನಡೆಸುವಂತೆ ಕೋರಿ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಟಿಡಿಪಿ ಮುಖ್ಯಸ್ಥ ಎನ್.ಚಂದ್ರಬಾಬು ನಾಯ್ಡು ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ನಾಯ್ಡು ತಮ್ಮ ಪತ್ರದಲ್ಲಿ ವಿಶಾಖಪಟ್ಟಣಂನ ಕಾರ್ಖಾನೆಯಲ್ಲಿ ಶುಕ್ರವಾರ ಅನಿಲ ಸೋರಿಕೆ ಮತ್ತು ವಿಷಕಾರಿ ಅನಿಲಗಳ ಬಿಡುಗಡೆಗೆ ಕಾರಣವಾದ ಅಂಶಗಳ ಬಗ್ಗೆ ವಿಚಾರಿಸಲು ವೈಜ್ಞಾನಿಕ ತಜ್ಞರ ಸಮಿತಿ ರಚಿಸುವಂತೆ ಒತ್ತಾಯಿಸಿದ್ದಾರೆ. ಜೊತೆಗೆ ವಿಶಾಖಪಟ್ಟಣಂ ನಗರ ಮತ್ತು ಸುತ್ತಮುತ್ತಲಿನ ವಾತಾವರಣದ ಗಾಳಿಯ ಗುಣಮಟ್ಟವನ್ನು ಸೂಕ್ಷ್ಮವಾಗಿ ಗಮನಿಸಬೇಕೆಂದು ಮನವಿ ಮಾಡಿದ್ದಾರೆ.
ಅನಿಲವು ಸೋರಿಕೆಯಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಆದಾಗ್ಯೂ, ಅಲ್ಲಿ ಇತರ ವಿಷಕಾರಿ ಅನಿಲಗಳು ಇರುವುದರ ಬಗ್ಗೆ ವರದಿಯಾಗಿದೆ. ಇವುಗಳಿಂದಾಗಿ ಮುಂದಿನ ಆರೋಗ್ಯದ ಪರಿಣಾಮಗಳನ್ನು ಅರ್ಥಮಾಡಿಕೊಳ್ಳಲು ಈ ಪ್ರಕರಣದ ತನಿಖೆ ಅತ್ಯಗತ್ಯವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಗುರುವಾರ, ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ಆರ್. ಆರ್. ವೆಂಕಟಪುರಂ ಗ್ರಾಮದ ಎಲ್.ಜಿ. ಪಾಲಿಮರ್ಸ್‌ನ ಅನಿಲ ಸ್ಥಾವರದಲ್ಲಿ ಸ್ಟೈರೀನ್ ಅನಿಲ ಸೋರಿಕೆಯಾಗಿದ್ದು, 11 ಜನರು ಸಾವನ್ನಪ್ಪಿದ್ದರು. ಘಟನೆಯ ಸಂತ್ರಸ್ತರಿಗೆ ಪರಿಹಾರಾರ್ಥವಾಗಿ ರಾಜ್ಯ ಸರ್ಕಾರ 30 ಕೋಟಿ ರೂ. ಬಿಡುಗಡೆ ಮಾಡಿದೆ.