ಅಮರಾವತಿ: ಮುಂದಿನ 48 ಗಂಟೆಗಳ ಒಳಗೆ ಮುಖ್ಯಮಂತ್ರಿ ವೈ.ಎಸ್. ಜಗನ್ಮೋಹನ್ ರೆಡ್ಡಿ ಅವರು ತಮ್ಮ ಮೂರು ರಾಜಧಾನಿಗಳ ನಿರ್ಧಾರ ಹಿಂತೆಗೆದುಕೊಳ್ಳಬೇಕು ಅಥವಾ ಅಸೆಂಬ್ಲಿಯನ್ನು ವಿಸರ್ಜಿಸಿ ತ್ರಿವಳಿ ರಾಜಧಾನಿ ಕ್ರಮಕ್ಕೆ ಹೊಸ ಸಾರ್ವಜನಿಕ ಆದೇಶ ಪಡೆಯಲು ಜನತೆಯ ಮುಂದೆ ಹೋಗಬೇಕು ಎಂದು ತೆಲುಗು ದೇಶಂ ಪಕ್ಷದ (ಟಿಡಿಪಿ) ಅಧ್ಯಕ್ಷ ಮತ್ತು ಆಂಧ್ರಪ್ರದೇಶ ವಿಧಾನಸಭೆ ಪ್ರತಿಪಕ್ಷದ ನಾಯಕ ಎನ್. ಚಂದ್ರಬಾಬು ನಾಯ್ಡು ಸವಾಲು ಹಾಕಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಾಯ್ಡು, ಧೈರ್ಯ ಇದ್ದರೆ ಮತ್ತು ತನ್ನ ಮೂರು ರಾಜಧಾನಿ ಯೋಜನೆಗೆ ಜನತೆಯ ಸಂಪೂರ್ಣ ಅನುಮೋದನೆ ಪಡೆಯುವ ವಿಶ್ವಾಸವಿದ್ದರೆ ಮುಖ್ಯಮಂತ್ರಿಗಳು ತಮ್ಮ ವಿಧಾನ ಸಭೆಯನ್ನು ವಿಸರ್ಜಿಸಿ ಜನರು ಮುಂದೆ ತೆರಳಲಿ ಎಂದರು.
ಮರುಚುನಾವಣೆಯಲ್ಲಿ ಜನರು ಮತ ಚಲಾಯಿಸಿ ವೈಎಸ್ಆರ್ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತಂದರೆ, ಟಿಡಿಪಿಯು ವಿನಮ್ರವಾಗಿ ಸಿಎಂ ಅವರ ಆದೇಶವನ್ನು ಸ್ವೀಕರಿಸುತ್ತದೆ. ಮತ್ತೆ ಈ ನಿರ್ಧಾರದ ವಿರುದ್ಧ ಧ್ವನಿ ಎತ್ತುವುದಿಲ್ಲ. ಮುಖ್ಯಮಂತ್ರಿಗಳು ಈ ಬಗ್ಗೆ ಸರಿಯಾದ ಪ್ರತಿಕ್ರಿಯೆ ತೆಗೆದುಕೊಳ್ಳದಿದ್ದರೇ ಟಿಡಿಪಿ ಮತ್ತು ಇತರ ವಿರೋಧ ಪಕ್ಷಗಳು ಕಾನೂನು ಹೋರಾಟಕ್ಕೆ ಮೊರೆ ಹೋಗಲಿದೆ. ಸಿಎಂ ಅವರನ್ನು ಜನತಾ ನ್ಯಾಯಾಲಯದ ಮುಂದೆ ಅಪರಾಧಿಯನ್ನಾಗಿ ಮಾಡುತ್ತವೆ ಎಂದು ನಾಯ್ದು ಹರಿಹಾಯ್ದರು.
ಅಮರಾವತಿ ಏಕೈಕ ರಾಜಧಾನಿಯಾಗಿ ಮುಂದುವರಿಯುತ್ತದೆ. ಅದನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು 2019ರ ಚುನಾವಣಾ ಪ್ರಚಾರದಲ್ಲಿ ಜನರಿಗೆ ನೀಡಿದ್ದ ಭರವಸೆಯನ್ನು ಮಾಜಿ ಮುಖ್ಯಮಂತ್ರಿ ಅವರು ಜಗನ್ ರೆಡ್ಡಿ ಅವರಿಗೆ ನೆನಪಿಸಿದರು. ಆ ಭರವಸೆ ನೀಡಿದ ನಂತರ ರಾಜ್ಯದ ಎಲ್ಲಾ ಐದು ಕೋಟಿ ಜನರ ಅನುಮೋದನೆ ಇಲ್ಲದೆ ರಾಜಧಾನಿಯನ್ನು ಅಮರಾವತಿಯಿಂದ ಸ್ಥಳಾಂತರಿಸುವ ಹಕ್ಕು ಸಿಎಂಗೆ ಇಲ್ಲ ಎಂದರು.
'ಪ್ರತ್ಯೇಕಿತ' ಆಂಧ್ರ ಪ್ರದೇಶಕ್ಕೆ ಮೂರು ರಾಜಧಾನಿ ಮಾಡುವ ಸಿಎಂ ಜಗನ್ ಮೋಹನ್ ರೆಡ್ಡಿ ಸರ್ಕಾರದ ಪ್ರಸ್ತಾವನೆಗೆ ರಾಜ್ಯಪಾಲ ಬಿಸ್ವಾಭೂಷಣ್ ಹರಿಚಂದನ್ ಅಂಕಿತ ಹಾಕಿದ್ದರು. ಅಮರಾವತಿ ಆಡಳಿತಾತ್ಮಕ ರಾಜಧಾನಿ, ವಿಶಾಖ ಪಟ್ಟಣ ಕಾರ್ಯ ನಿರ್ವಾಹಕ ರಾಜಧಾನಿ ಹಾಗೂ ಕರ್ನೂಲು ಜಿಲ್ಲೆ ನ್ಯಾಯ ರಾಜಧಾನಿಯಾಗಿರಲಿದೆ.