ಮುಂಬೈ: ಮಾರಕ ವೈರಸ್ನಿಂದ ಚೇತರಿಸಿಕೊಂಡ ತಬ್ಲಿಘಿ ಜಮಾತ್ ಸದಸ್ಯರೊಬ್ಬರು ಇತರ ರೋಗಿಗಳ ಚಿಕಿತ್ಸೆಗಾಗಿ ಪ್ಲಾಸ್ಮಾ ದಾನ ಮಾಡಿ ಮಾದರಿಯಾಗಿದ್ದಾರೆ.
ಮುಂಬೈನ ನಿವಾಸಿ ಅಬ್ದುರ್ ರೆಹಮಾನ್, ಮಾರ್ಚ್ 21 ರಂದು ಕೊರೊನಾ ವೈರಸ್ಗೆ ತುತ್ತಾಗಿ ಮುಂಬೈನ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಾಗಿದ್ದರು. ಸತತ 18 ದಿನಗಳ ಕಾಲ ಚಿಕಿತ್ಸೆ ಪಡೆದು ಗುಣಮುಖರಾದ ಬಳಿಕ ಮಾರ್ಚ್ 31 ರಂದು ಇವರನ್ನು ಡಿಸ್ಚಾರ್ಜ್ ಮಾಡಲಾಗಿತ್ತು. ಈಗ ಪ್ಲಾಸ್ಮಾ ದಾನ ಮಾಡುವ ಮೂಲಕ ರೆಹಮಾನ್ ಮತ್ತಷ್ಟು ಕೊರೊನಾ ಸೋಂಕಿತರು ಗುಣಮುಖರಾಗುವಲ್ಲಿ ತಮ್ಮ ಕೊಡುಗೆ ನೀಡಿದ್ದಾರೆ.
ಏಪ್ರಿಲ್ 21 ರಂದು ಪ್ಲಾಸ್ಮಾ ದಾನಕ್ಕಾಗಿ ಮುಂಬೈನ ನಾಯರ್ ಆಸ್ಪತ್ರೆಯಿಂದ ನನಗೆ ಕರೆ ಬಂತು. ಆ ಬಳಿಕ ಕುಟುಂಬ ಮತ್ತು ಸ್ನೇಹಿತರೊಂದಿಗೆ ಚರ್ಚಿಸಿದಾಗ ಅವರು ಇದಕ್ಕೆ ಒಪ್ಪಲಿಲ್ಲ. ನಂತರ ನಾನು ತಬ್ಲೀಘಿ ಜಮಾತ್ ಮಾರ್ಕಾಜ್ ಮುಖ್ಯಸ್ಥ ಮೌಲಾನಾ ಸಾದ್ ಜೊತೆಗೆ ಮಾತನಾಡಿದೆ. ಪ್ಲಾಸ್ಮಾ ದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿ ಸಹಾಯ ಮಾಡುವಂತೆ ಅವರು ಸಲಹೆ ನೀಡಿದರು. ಆ ಬಳಿಕ ನಾನು ಪ್ಲಾಸ್ಮಾ ದಾನ ಮಾಡಲು ಮನಸು ಮಾಡಿದೆ. ಮುಂಬೈ ಆಸ್ಪತ್ರೆಯಲ್ಲಿ ಪ್ಲಾಸ್ಮಾ ದಾನ ಮಾಡಿದ ಮೊದಲ ವ್ಯಕ್ತಿ ನಾನು ಎಂದು ರೆಹಮಾನ್ ತಿಳಿಸಿದ್ದಾರೆ.
ಪ್ಲಾಸ್ಮಾ ದಾನ ಮಾಡಿದ ನಂತರ ನನಗೆ ತುಂಬಾ ಹೆಮ್ಮೆ ಅನಿಸುತ್ತಿದೆ. ನನ್ನ ಪ್ಲಾಸ್ಮಾದಿಂದ ಚೇತರಿಸಿಕೊಳ್ಳುವವರಿಗೆ ಅಲ್ಲಾಹು ಉತ್ತಮ ಜೀವನವನ್ನು ಆಶೀರ್ವದಿಸಬೇಕೆಂದು ನಾನು ಬಯಸುತ್ತೇನೆ ಎಂದು ಅವರು ಹೇಳಿದರು.