ಮುಂಬೈ: ಲಾಕ್ಡೌನ್ನಿಂದಾಗಿ ಮುಂಬೈನಲ್ಲಿ ಸಿಕ್ಕಿಬಿದ್ದಿರುವ ವಲಸೆ ಕಾರ್ಮಿಕರನ್ನು ಅವರ ತವರಿಗೆ ಕಳುಹಿಸಲು ಶ್ರಮಿಸುತ್ತಿರುವ ನಟ ಸೋನು ಸೂದ್ ಅವರು ವಲಸೆ ಕಾರ್ಮಿಕರನ್ನು ಭೇಟಿಯಾಗದಂತೆ ಮಹಾರಾಷ್ಟ್ರ ಸರಕಾರ ತಡೆ ಒಡ್ಡಿದೆ.
ಮುಂಬೈನಲ್ಲಿನ ವಲಸೆ ಕಾರ್ಮಿಕರು ಉತ್ತರ ಪ್ರದೇಶದ ಅಝಮಗಡ್ಗೆ ತೆರಳಲು ಅನುಕೂಲವಾಗುವಂತೆ ಸೂದ್, ವಿಶೇಷ ರೈಲಿನ ವ್ಯವಸ್ಥೆ ಮಾಡಿದ್ದರು. ಈ ಸಂದರ್ಭದಲ್ಲಿ ಸೋಮವಾರ ರಾತ್ರಿ ವಲಸೆ ಕಾರ್ಮಿಕರನ್ನು ಭೇಟಿಯಾಗಲು ಮುಂಬೈನ ಬಾಂದ್ರಾ ರೈಲು ನಿಲ್ದಾಣಕ್ಕೆ ಅವರು ತೆರಳಿದ್ದರು. ಆದರೆ ಅಲ್ಲಿ ಕಾವಲಿದ್ದ ರೈಲ್ವೆ ಸುರಕ್ಷಾ ದಳದ ಸಿಬ್ಬಂದಿ ಸೂದ್ ಅವರನ್ನು ಪ್ಲಾಟ್ಫಾರ್ಮ್ ಒಳಗೆ ಬಿಡಲಿಲ್ಲ. ಸುಮಾರು 45 ನಿಮಿಷ ಆರ್ಪಿಎಫ್ ಕಚೇರಿ ಎದುರು ಕಾದ ಸೂದ್ ಕಾರ್ಮಿಕರನ್ನು ಭೇಟಿಯಾಗದೆ ವಾಪಸ್ ತೆರಳಬೇಕಾಯಿತು.
"ನನಗೆ ಪ್ಲಾಟ್ಫಾರ್ಮ್ ಪ್ರವೇಶಿಸುವ ಹಕ್ಕು ಇದೆ ಅಥವಾ ಇಲ್ಲ ಎಂಬುದು ಮುಖ್ಯವಲ್ಲ. ಸದ್ಯದ ಪರಿಸ್ಥಿತಿಯಲ್ಲಿ ವಲಸೆ ಕಾರ್ಮಿಕರು ಸುರಕ್ಷಿತವಾಗಿ ಅವರ ಊರುಗಳಿಗೆ ತೆರಳಿದರೆ ಅಷ್ಟೇ ಸಾಕು. ನಾನು ಅವರಿಗೆ ಶುಭಾಶಯ ಹೇಳಲು ಮಾತ್ರ ಬಂದಿದ್ದೆ." ಎಂದು ಈ ಸಂದರ್ಭದಲ್ಲಿ ಸೂದ್ ಹೇಳಿದರು.
ಮುಂಬೈ ರೈಲ್ವೆ ವಿಭಾಗದ ವ್ಯವಸ್ಥಾಪಕರ ಅನುಮತಿ ಇಲ್ಲದ ಕಾರಣ ಸೂದ್ ಅವರನ್ನು ಪ್ಲಾಟ್ಫಾರ್ಮ್ ಮೇಲೆ ಬಿಡಲಿಲ್ಲ ಎಂದು ಆರ್ಪಿಎಫ್ ಮೂಲಗಳು ತಿಳಿಸಿವೆ.
ವಲಸೆ ಕಾರ್ಮಿಕರಿಗೆ ಸೋನು ಸೂದ್ ಅವರು ಸಹಾಯ ಮಾಡುತ್ತಿರುವ ವಿಷಯ ಈಗ ರಾಜಕೀಯ ರಂಗು ಪಡೆದುಕೊಳ್ಳುತ್ತಿದೆ. ಬಿಜೆಪಿ ಹಾಗೂ ಶಿವಸೇನೆ ಎರಡೂ ಪಕ್ಷಗಳು ಈ ವಿಷಯದಲ್ಲಿ ರಾಜಕೀಯದ ಬೇಳೆ ಬೇಯಿಸಿಕೊಳ್ಳುತ್ತಿವೆ ಎನ್ನಲಾಗಿದೆ.