ಕೋಲ್ಕತ್ತಾ: ಬಿಜೆಪಿ ಹೊಸ ಪದಾಧಿಕಾರಿಗಳ ತಂಡ ರಚನೆ ಆಗಿದ್ದು, ಅನೇಕ ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ. ಪ್ರಮುಖವಾಗಿ ಮುಂಬರುವ ಬಿಹಾರ ಹಾಗೂ ಪಶ್ಚಿಮ ಬಂಗಾಳ ಚುನಾವಣೆ ಗಮನದಲ್ಲಿಟ್ಟುಕೊಂಡು ಅಲ್ಲಿನ ಮುಖಂಡರಿಗೆ ಹೆಚ್ಚಿನ ಸ್ಥಾನ ನೀಡುವ ಕೆಲಸಕ್ಕೆ ಬಿಜೆಪಿ ಕೈ ಹಾಕಿದೆ.
ಪಶ್ಚಿಮ ಬಂಗಾಳದ ಬಿಜೆಪಿ ಮುಖಂಡ ಮುಕುಲ್ ರಾಯ್ಗೆ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರ ಸ್ಥಾನ ನೀಡಲಾಗಿದೆ. ಇಷ್ಟು ದಿನ ರಾಷ್ಟ್ರೀಯ ಕಾರ್ಯಕಾರಿಣಿಯ ಸಾಮಾನ್ಯ ಸದಸ್ಯರಾಗಿದ್ದ ರಾಯ್ ಇದೀಗ ಉನ್ನತ ಹುದ್ದೆ ನೀಡಲಾಗಿದ್ದು, 2021ರ ಪಶ್ಚಿಮ ಬಂಗಾಳ ಚುನಾವಣೆ ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಮುಕುಲ್ ರಾಯ್ ಜತೆಗೆ ಡಾ.ರಮಣ್ ಸಿಂಗ್, ಅನ್ನಪೂರ್ಣ ದೇವಿ, ಬೈಜಯಂತ್ ಜೇ ಪಾಂಡೆ ಅವರು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ತೃಣಮೂಲ ಕಾಂಗ್ರೆಸ್ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದ ಮುಕುಲ್ ರಾಯ್ 2017ರಲ್ಲಿ ಪಕ್ಷ ತೊರೆದಿದ್ದರು. ಇದಾದ ಬಳಿಕ ಭಾರತೀಯ ಜನತಾ ಪಾರ್ಟಿ ಸೇರಿಕೊಂಡಿದ್ದಾರೆ. ತಮಗೆ ಉನ್ನತ ಹುದ್ದೆ ನೀಡಿದ್ದಕಾಗಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರಿಗೆ ಧನ್ಯವಾದ ಹೇಳಿದ್ದಾರೆ. ಮುಂದಿನ ವರ್ಷ ಮಾರ್ಚ್ - ಏಪ್ರಿಲ್ ತಿಂಗಳಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಪಕ್ಷವನ್ನ ಗೆಲ್ಲಿಸುವ ಭರವಸೆ ನೀಡಿದ್ದಾರೆ.