ಮುಂಬೈ (ಮಹಾರಾಷ್ಟ್ರ ) : ಲಾಕ್ ಡೌನ್ನಿಂದಾಗಿ ವಲಸೆ ಕಾರ್ಮಿಕರು ಊರಿಗೆ ತೆರಳಿದ ಹಿನ್ನೆಲೆ ಮುಂಬೈ- ನಾಗ್ಪುರ ನಡುವೆ ಸಂಪರ್ಕ ಕಲ್ಪಿಸುವ ಮಹಾರಾಷ್ಟ್ರ ಸರ್ಕಾರದ ಕನಸಿನ ಯೋಜನೆಯಾದ ಸಮೃದ್ದಿ ಮಹಾಮಾರ್ಗ್ ಕಾಮಾಗಾರಿ ಕುಂಟಿತವಾಗಿದ್ದು, ಕಾಮಗಾರಿಯ ವೆಚ್ಚವೂ ಹೆಚ್ಚಾಗುವ ಸಾಧ್ಯತೆಯಿದೆ.
ಮುಂಬೈನಿಂದ ನಾಗ್ಪುರಕ್ಕೆ ಸೂಪರ್ ಫಾಸ್ಟ್ ಪ್ರಯಾಣ ಮಾಡಲು ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿತ್ತು. ಕಾಮಗಾರಿಯ ಉಸ್ತುವಾರಿ ವಹಿಸಿರುವ ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ (ಎಂಎಸ್‌ಆರ್‌ಡಿಸಿ) ಕೆಲಸವನ್ನು ಬೇಗ ಮುಗಿಸುವ ಉತ್ಸಾಹದಲ್ಲಿತ್ತು. ಅದಕ್ಕಾಗಿ ಲಾಲ್ ಡೌನ್ ನಡುವೆಯೂ ಕಾಮಗಾರಿ ನಡೆಸಲಾಗುತ್ತಿತ್ತು. ಇದೀಗ ಕಾರ್ಮಿಕರು ಊರಿಗೆ ತೆರಳಿರುವ ಕಾರಣ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ.
ಫೆಬ್ರವರಿ 2020 ರ ಹೊತ್ತಿಗೆ ಯೋಜನೆಯ 16 ಪ್ಯಾಕೇಜ್‌ಗಳಲ್ಲಿ 20 ಸಾವಿರ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಅವರಲ್ಲಿ ಹೆಚ್ಚಿನವರು ವಲಸೆ ಕಾರ್ಮಿಕರಾಗಿದ್ದು, ಕೊರೊನಾ ವೈರಸ್ ಬಿಕ್ಕಟ್ಟು ಮತ್ತು ಲಾಕ್ ಡೌನ್ ಪ್ರಾರಂಭವಾದ ನಂತರ ವಲಸೆ ಕಾರ್ಮಿಕರ ಸಂಖ್ಯೆ ಕ್ಷೀಣಿಸಲು ಪ್ರಾರಂಭಿಸಿದೆ. ಹೀಗಾಗಿ ಏಪ್ರಿಲ್ 14 ಕ್ಕೆ ಒಟ್ಟು 20 ಸಾವಿರ ಇದ್ದ ಕಾರ್ಮಿಕರ ಸಂಖ್ಯೆ 14,450 ಕ್ಕೆ ಇಳಿದಿದೆ. ಬಳಿಕ ಸರ್ಕಾರ ಕಾರ್ಮಿಕರಿಗೆ ಊರಿಗೆ ತೆರಳಲು ಅನುಮತಿ ನೀಡಿದ ಹಿನ್ನೆಲೆ ಇನ್ನಷ್ಟು ಕಾರ್ಮಿಕರು ತಮ್ಮ ತಮ್ಮ ಹಳ್ಳಿಗಳಿಗೆ ಮರಳಿದ್ದು , ಇದೀಗ ಕಾರ್ಮಿಕರ ಸಂಖ್ಯೆ ಇನ್ನೂ 5 ಸಾವಿರದಷ್ಟು ಕಮ್ಮಿಯಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಎಂಎಸ್‌ಆರ್‌ಡಿಸಿ ಸಹ-ವ್ಯವಸ್ಥಾಪಕ ನಿರ್ದೇಶಕ ಅನಿಲ್ ಕುಮಾರ್ ಗೈಕ್ವಾಡ್, ಮೇ 14ರಂದು ಪರಿಶೀಲನೆ ನಡೆಸಿದಾಗ ಒಟ್ಟು 9,500 ಜನ ಕಾಮಿಕರು ಕೆಲಸ ಮಾಡುತ್ತಿದ್ದರು. ನಮಗೆ ಒಟ್ಟು 10,500 ಕಾರ್ಮಿಕರ ಕೊರತೆ ಉಂಟಾಗಿದೆ. ಹೀಗಾಗಿ ಕೆಲಸ ನಿಧಾನವಾಗಿ ಸಾಗುತ್ತಿದೆ ಎಂದಿದ್ದಾರೆ.