ಸೂರ್ಯಪೇಟೆ(ತೆಲಂಗಾಣ): ಮಹಿಳೆಯೊಬ್ಬಳು ತನ್ನ ಕುಡುಕ ಗಂಡನ ಮೇಲೆ ಕೋಪಗೊಂಡು ತನ್ನ ಇಬ್ಬರು ಮಕ್ಕಳನ್ನು ಕೆರೆಗೆ ಎಸೆದು ಕೊಂದಿರುವ ಘಟನೆ ತೆಲಂಗಾಣದ ಸೂರ್ಯಪೇಟ್ನಲ್ಲಿ ನಡೆದಿದೆ.
ಮೃತ ಇಬ್ಬರು ಮಕ್ಕಳನ್ನು ಹರ್ಷವರ್ಧನ್ (6) ಮತ್ತು ಜ್ಯೋತಿ (8) ಎಂದು ಗುರುತಿಸಲಾಗಿದೆ. ಆರೋಪಿ ನಾಗಮಣಿ(35) ಸುಮಾರು 15 ವರ್ಷಗಳ ಹಿಂದೆ ಪ್ರಶಾಂತ್ ಎಂಬುವರನ್ನು ವಿವಾಹವಾಗಿದ್ದರು. ಇಬ್ಬರೂ ಕಳೆದ ಎಂಟು ವರ್ಷಗಳಿಂದ ಸೂರ್ಯಪೇಟೆನಲ್ಲಿ ವಾಸಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಂಡ ದಿನಾಲೂ ಕುಡಿದು ಬಂದು ಮನೆಯಲ್ಲಿ ಜಗಳವಾಡುತ್ತಿದ್ದ. ಆ ರಾತ್ರಿಯೂ ದಂಪತಿ ಜಗಳವಾಡಿದ್ದರು. ಗಂಡ ಮಲಗಿದ ಬಳಿಕ ಹೆಂಡತಿ ಮಕ್ಕಳನ್ನು ಮನೆಯ ಹತ್ತಿರವಿರುವ ಕೆರೆಗೆ ಎಸೆದಿದ್ದಾಳೆ. ಈ ಘಟನೆಯಲ್ಲಿ ಮಕ್ಕಳು ಇಬ್ಬರೂ ಸಾವನ್ನಪ್ಪಿದ್ದಾರೆ. ಆ ತಾಯಿಯನ್ನು ಪತ್ತೆ ಹಚ್ಚಲು ನಾವು ಪ್ರಯತ್ನಿಸುತ್ತಿದ್ದೇವೆ. ಆ ಬಳಿಕ ಘಟನೆಗೆ ಸಂಬಂಧಿಸಿದ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳುತ್ತೇವೆ, ಎಂದು ಸೂರ್ಯಪೇಟೆ ಪೊಲೀಸ್ ಇನ್ಸ್‌ಪೆಕ್ಟರ್ ಆಂಜನೇಯುಲು ಹೇಳಿದ್ದಾರೆ.
ಇನ್ನು ಶವ ಪರೀಕ್ಷೆಯ ವರದಿಗಳ ನಂತರ ಮಕ್ಕಳನ್ನು ಕೊಲೆ ಮಾಡಿದ್ದಾರಾ ಅಥವಾ ಬೇರೆ ಯಾವುದಾದರೂ ಕಾರಣದಿಂದ ಸಾವನ್ನಪ್ಪಿದ್ದಾರಾ ಎಂದು ತಿಳಿದುಕೊಳ್ಳಬಹುದು, ಎಂದು ಹೇಳಿದರು.
ತಾಯಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.