ಬೀಜಿಂಗ್: ಕೊರೊನಾ ಸಾಂಕ್ರಾಮಿಕ ರೋಗವು ಕೇವಲ ದೈಹಿಕ ಆರೋಗ್ಯದ ಮೇಲಷ್ಟೇ ಅಲ್ಲ, ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ ಎಂಬ ಆಘಾತಕಾರಿ ವಿಷಯವನ್ನು ಅಧ್ಯಯನವೊಂದು ಹೊರಹಾಕಿದೆ.
ಚೀನಾದಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ವೈದ್ಯಕೀಯ ಸಿಬ್ಬಂದಿಯಲ್ಲಿ 1/3 ಭಾಗದಷ್ಟು ಸಿಬ್ಬಂದಿ ಇನ್ಸೊಮೇನಿಯಾ ಅಥವಾ ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ.
ಫ್ರಾಂಟಿಯರ್ಸ್ ಇನ್ ಸೈಕಿಯಾಟ್ರಿ ಜರ್ನಲ್ ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ನಿದ್ದೆ ಮಾಡದೇ ಆಸ್ಪತ್ರೆಯಲ್ಲಿ ಶಿಫ್ಟ್‌ನಲ್ಲಿ ಕೆಲಸ ಮಾಡುವ ಆರೋಗ್ಯ ಕಾರ್ಯಕರ್ತರು ನಂತರದಲ್ಲಿ ನಿದ್ರಾಹೀನತೆಯಿಂದಾಗಿ ಖಿನ್ನತೆ, ಆತಂಕ ಮತ್ತು ಒತ್ತಡಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗಿದೆ.
ಒತ್ತಡ ಸಂಬಂಧಿತ ನಿದ್ರಾಹೀನತೆಯು ಅಸ್ಥಿರವಾಗಿರುತ್ತದೆ ಮತ್ತು ಕೆಲವು ದಿನಗಳವರೆಗೂ ಆ ಸಮಸ್ಯೆ ಮುಂದುವರಿಯುತ್ತದೆ ಎಂದು ಚೀನಾದ ವೈದ್ಯಕೀಯ ವಿದ್ಯಾನಿಲಯವೊಂದರ ಪ್ರೊಫೆಸರ್ ತಿಳಿಸಿದ್ದಾರೆ. ಆದ್ರೆ ಒಂದು ವೇಳೆ ಕೋವಿಡ್-19 ಕೇಸ್ ಹೆಚ್ಚಾಗುತ್ತಾ ಹೋದರೆ ಕ್ರಮೇಣ ಇದು ದೀರ್ಘಕಾಲೀನ ನಿದ್ರಾಹೀನತೆಯಾಗಿ ಮುಂದುವರಿಯಲೂಬಹುದು ಎಂದಿದ್ದಾರೆ.
ಈ ಅಧ್ಯಯನದಲ್ಲಿ, ವಿಜ್ಞಾನಿಗಳು ಸಾಮಾಜಿಕ ಮಾಧ್ಯಮ ವೇದಿಕೆಯಾದ WeChat ನಲ್ಲಿ ಸುಮಾರು 1,563 ಜನರನ್ನು ಬಳಸಿಕೊಂಡು ಜನವರಿ 29 ರಿಂದ ಫೆಬ್ರವರಿ 3 ರ ನಡುವೆ ಈ ಸಮೀಕ್ಷೆ ನಡೆಸಿದ್ದಾರೆ. ಇದರಲ್ಲಿ ಭಾಗವಹಿಸಿದ 1,563 ಜನರಲ್ಲಿ, 564 ಜನರು, ಅಂದರೆ ಶೇಕಡಾ 36.1 ಜನರು ನಿದ್ರಾಹೀನತೆಯ ಲಕ್ಷಣಗಳನ್ನು ಹೊಂದಿದ್ದಾರೆಂದು ಅಧ್ಯಯನವು ತಿಳಿಸಿದೆ. ವೈದ್ಯಕೀಯ ಕಾರ್ಯಕರ್ತರೇ ಸಾಮಾನ್ಯರಿಗಿಂತ ಹೆಚ್ಚಿನ ಒತ್ತಡದಲ್ಲಿದ್ದಾರೆ ಎಂದು ಈ ಅಧ್ಯಯನ ತಿಳಿಸಿದೆ.
ಆಸ್ಪತ್ರೆಯಲ್ಲಿ ಸೋಂಕಿತ ರೋಗಿಗಳೊಂದಿಗೆ ಆರೋಗ್ಯ ಸಿಬ್ಬಂದಿ ನಿಕಟ ಸಂಪರ್ಕದಲ್ಲಿದ್ದರಿಂದ ಅವರಿಗೂ ರೋಗ ಹರಡಬಹುದು, ಹಾಗೂ ಅವರಿಂದ ತಮ್ಮ ಕುಟುಂಬ ಮತ್ತು ಸ್ನೇಹಿತರಿಗೆ ಸೋಂಕು ತಗುಲಬಹುದು ಎಂಬ ಆತಂಕದಲ್ಲಿದ್ದಾರೆ ಎಂದಿದೆ ಅಧ್ಯಯನ.
ಇನ್ನು ಈ ವೈದ್ಯಕೀಯ ಸಿಬ್ಬಂದಿ 12 ಗಂಟೆಗಳಿಗಿಂತ ಹೆಚ್ಚು ಕಾಲ ವೈಯಕ್ತಿಕ ರಕ್ಷಣಾ ಸಾಧನಗಳನ್ನು (ಪಿಪಿಇ) ಧರಿಸಬೇಕಾಗಿತ್ತು, ಅವರು ಪಿಪಿಇ ತೆಗೆದರೆ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿದ್ದರಿಂದ ಆಗಾಗ್ಗೆ ವಿರಾಮ ತೆಗೆದುಕೊಳ್ಳಲು ಸಾಧ್ಯವಾಗದೇ ಅವರು ಮತ್ತಷ್ಟು ಆತಂಕಕ್ಕೊಳಗಾಗಿದ್ದರು ಎಂದು ಅಧ್ಯಯನವು ವಿವರಿಸಿದೆ.
"ಈ ಅಪಾಯಕಾರಿ ಸನ್ನಿವೇಶಗಳಲ್ಲಿ , ವೈದ್ಯಕೀಯ ಸಿಬ್ಬಂದಿ ಮಾನಸಿಕವಾಗಿ ಮತ್ತು ದೈಹಿಕವಾಗಿ ದಣಿದಿದ್ದಾರೆ ಮತ್ತು ಆದ್ದರಿಂದ ಹೆಚ್ಚಿನ ಒತ್ತಡದಿಂದಾಗಿ ನಿದ್ರಾಹೀನತೆಯ ಅಪಾಯಕ್ಕೆ ಒಳಗಾಗಿದ್ದಾರೆ ಎಂದು ವಿಜ್ಞಾನಿಗಳು ಅಧ್ಯಯನದಲ್ಲಿ ತಿಳಿಸಿದ್ದಾರೆ.
ಸಂಶೋಧಕರ ಪ್ರಕಾರ, ನಿದ್ರೆಯ ಅಸ್ವಸ್ಥತೆಯನ್ನು ತಗ್ಗಿಸಲು ವೈದ್ಯಕೀಯ ಸಿಬ್ಬಂದಿ ಅನುಸರಿಸಬಹುದಾದ ಕೆಲವು ಮಾರ್ಗಗಳನ್ನು ಈ ಅಧ್ಯಯನ ತಿಳಿಸಿದೆ. ಇದರಲ್ಲಿ ನಿದ್ರಾಹೀನತೆಯ ಶಿಕ್ಷಣ, ವಿಶ್ರಾಂತಿ ಚಿಕಿತ್ಸೆ, ಉದ್ದೀಪನ ನಿಯಂತ್ರಣ, ನಿದ್ರೆಯ ನಿರ್ಬಂಧ ಮತ್ತು ಅರಿವಿನ ಚಿಕಿತ್ಸೆಯನ್ನು ಒಳಗೊಂಡಿರುವ ಕಾಗ್ನಿಟಿವ್ ಬಿಹೇವಿಯರಲ್ ಥೆರಪಿ ಫಾರ್ ನಿದ್ರಾಹೀನತೆ (ಸಿಬಿಟಿಐ) ಸೇರಿದೆ.