ಲಕ್ನೋ: ಉತ್ತರ ಪ್ರದೇಶದ ಭಾದೋಹಿ ಎಂಬಲ್ಲಿ ಕಳೆದ ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ 17 ವರ್ಷದ ಬಾಲಕಿಯೊಬ್ಬಳು ಬುಧವಾರ ಶವವಾಗಿ ಪತ್ತೆಯಾಗಿದ್ದಾಳೆ.
ಆದರೆ, ಇದೊಂದು ಕೊಲೆ ಎಂದು ಆರೋಪಿಸಿ ಮೃತ ಬಾಲಕಿಯ ಪಾಲಕರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಾಲಕಿಯ ಗುರುತು ಮರೆಮಾಚಲು ಆಕೆಯ ಮುಖ ಮತ್ತು ದೇಹದ ಮೇಲೆ ಆ್ಯಸಿಡ್ ಸುರಿದು ಸುಟ್ಟುಹಾಕಲಾಗಿದೆ ಎಂದು ಆರೋಪಿಸಿದ್ದಾರೆ.
ಆದರೆ, ಮರಣೋತ್ತರ ಪರೀಕ್ಷೆಯಲ್ಲಿ ಬಾಲಕಿ ನದಿಯಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ಉಲ್ಲೇಖಿಸಲಾಗಿದೆ. ಇದು ಪ್ರಕರಣವನ್ನು ಮುಚ್ಚಿಹಾಕುವ ಹುನ್ನಾರ. ಮೂಲ ಕಾರಣವೇ ಬೇರೆ ಇದೆ. ಬಾಲಕಿಯ ಮೇಲೆ ದುಷ್ಕರ್ಮಿಗಳು ಅತ್ಯಾಚಾರವೆಸಗಿ ಕೊಲೆಗೈದಿದ್ದಾರೆ ಎಂದು ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.
ಈ ದುರ್ಘಟನೆಯು ಧೌಹರಾ ಎಂಬ ಹಳ್ಳಿಯಲ್ಲಿ ನಡೆದಿದೆ ಎಂದು ತಿಳಿದು ಬಂದಿದ್ದು ಬಾಲಕಿಯ ದೇಹವನ್ನು ಬುಧವಾರ ಮಧ್ಯಾಹ್ನ ನದಿಯಿಂದ ಹೊರತೆಗೆಯಲಾಗಿದೆ. ಬಾಲಕಿಯು ಸೋಮವಾರ ದನಗಳನ್ನು ಮೇಯಿಸಲು ಹೋಗಿದ್ದ ವೇಳೆ ನಾಪತ್ತೆಯಾಗಿದ್ದಳು. ಈ ಬಗ್ಗೆ ಬಾಲಕಿಯ ಪೋಷಕರು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಏತನ್ಮಧ್ಯೆ ಅಪರಾಧಿಗಳನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿ ಸ್ಥಳೀಯರು ಭಾದೋಹಿ-ಜಾನ್‌ಪುರ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು.
ಬಾಲಕಿಯ ಕತ್ತು ಹಿಸುಕಿ ಗುರುತನ್ನು ಮರೆಮಾಚಲು ಸುಟ್ಟುಹಾಕಲಾಗಿದೆ ಎಂದು ಬಾಲಕಿಯ ತಂದೆ ಶಂಕಿಸಿ ದೂರು ನೀಡಿದ್ದಾರೆ. ಅವರ ಹೇಳಿಕೆಯಂತೆ ದೂರು ದಾಖಲಿಸಿಕೊಂಡಿದ್ದೇವೆ. ಆಕೆಯ ಗುರುತನ್ನು ಮರೆಮಾಚುವ ಸಲುವಾಗಿ ಆಕೆಯ ಮುಖಕ್ಕೆ ಆ್ಯಸಿಡ್ ಬಳಸಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಅಪರಾಧಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿ ರಾಮ್ ಬಧನ್ ಸಿಂಗ್ ಮಾಹಿತಿ ನೀಡಿದ್ದಾರೆ.