ಶ್ರೀನಗರ: ಮಧ್ಯ ಕಾಶ್ಮೀರದ ಗಂಡರ್‌ಬಾಲ್‌ನ ನುನರ್ ಪ್ರದೇಶದಲ್ಲಿ ಬಿಜೆಪಿ ಕಾರ್ಯಕರ್ತ ಗುಲಾಮ್ ಖಾದಿರ್ ಮೇಲೆ ಮಂಗಳವಾರ ಉಗ್ರರು ಗುಂಡು ಹಾರಿಸಿದ್ದು, ಘಟನೆಯಲ್ಲಿ ಗಾಯಗೊಂಡಿದ್ದ ಪೊಲೀಸ್ (ಪಿಎಸ್ಒ) ಅಸುನೀಗಿದ್ದಾರೆ. ಇದೇ ವೇಳೆ ಅಪರಿಚಿತ ಉಗ್ರನನ್ನು ಹತ್ಯೆಗೈಯ್ಯಲಾಗಿದೆ.
ಮೂಲಗಳ ಪ್ರಕಾರ, ಮಂಗಳವಾರ ಸಂಜೆ ಬಿಜೆಪಿ ಕಾರ್ಯಕರ್ತ ಗುಲಾಮ್ ಖಾದಿರ್ ಅವರ ಮನೆಯ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಕಾರ್ಯಕರ್ತನಿಗೆ ನಿಯೋಜನೆಗೊಂಡಿದ್ದ ಪೊಲೀಸ್ ಸಿಬ್ಬಂದಿ ಸಮಯೋಚಿತ ಪ್ರತಿದಾಳಿ ದಾಳಿ ನಡೆಸಿ ಒಬ್ಬ ಉಗ್ರನನ್ನು ಹೊಡೆದುರುಳಿಸಿದ್ದಾರೆ. ಘಟನೆಯಲ್ಲಿ ಖಾದಿರ್ ಸುರಕ್ಷಿತರಾಗಿದ್ದು, ತೀವ್ರ ಗಾಯಗೊಂಡಿದ್ದ ಪೊಲೀಸ್ ಸಿಬ್ಬಂದಿ ಮೊಹಮ್ಮದ್ ಅಲ್ತಾಫ್ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಘಟನೆ ಬಳಿಕ ನುನರ್ ಪ್ರದೇಶವನ್ನು ಪೊಲೀಸರು ಸುತ್ತುವರೆದಿದ್ದು, ಉಗ್ರರಿಗಾಗಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ. ಬುಡ್ಗಾಮ್ ಜಿಲ್ಲೆಯಲ್ಲಿ ಬಿಡಿಸಿ ಅಧ್ಯಕ್ಷ ಭೂಪಿಂದರ್ ಸಿಂಗ್ ಹತ್ಯೆ ನಡೆದ ಒಂದು ತಿಂಗಳ ಬಳಿಕ ಮತ್ತೆ ಉಗ್ರರು ಅಟ್ಟಹಾಸ ಮೆರೆದಿದ್ದಾರೆ.