ಹೈದರಾಬಾದ್: ದೇಶಾದ್ಯಂತ ಲಾಕ್ಡೌನ್ ಜಾರಿಯಲ್ಲಿರುವ ಕಾರಣ ವಲಸೆ ಕಾರ್ಮಿಕರು ಮನೆ ಸೇರಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಹೀಗಾಗಿ ಸಾವಿರಾರು ಕಾರ್ಮಿಕರು ನಡೆದುಕೊಂಡು ಬಂದು ಮನೆ ಸೇರಿಕೊಳ್ಳುವ ಆತುರದಲ್ಲಿದ್ದು, ಇಲ್ಲೊಂದೆಡೆ ಯುವಕ ಬಲಿಯಾಗಿದ್ದಾನೆ.
ಹೈದರಾಬಾದ್‌ನಿಂದ ನಡೆದುಕೊಂಡು ಹೋಗಿ ಒಡಿಶಾ ಸೇರಲು ನಿರ್ಧರಿಸಿದ್ದ 21 ವರ್ಷದ ಯುವಕ ಬಿಸಿಲಿನ ತಾಪ ತಾಳಲಾರದೆ ಸಾವನ್ನಪ್ಪಿದ್ದಾನೆ. ಕಳೆದ ಭಾನುವಾರ ಹೈದರಾಬಾದ್ ಬಿಟ್ಟಿದ್ದ ಕೆಲ ವಲಸೆ ಕಾರ್ಮಿಕರೊಂದಿಗೆ ಈ ಯುವಕ ಕೂಡ ಪ್ರಯಾಣ ಬೆಳೆಸಿದ್ದ. ಭದ್ರಾಚಲಂ ತಲುಪುತ್ತಿದ್ದಂತೆ ಈತನಿಗೆ ಎದೆನೋವು ಕಾಣಿಸಿಕೊಂಡಿದ್ದು ಬಳಿಕ ವಾಂತಿ ಮಾಡಿಕೊಂಡಿದ್ದಾನೆ. ನಂತರ ಬಿಸಿಲಿನ ಬೇಗೆಗೆ ಬಳಲಿ ರಸ್ತೆಯಲ್ಲೇ ಕುಸಿದು ಬಿದ್ದಿದ್ದಾನೆ. ಈ ವೇಳೆ ಆತನೊಂದಿಗಿದ್ದ ಕೆಲವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ಆತನನ್ನು ಹತ್ತಿರದ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಚಿಕಿತ್ಸೆ ನೀಡಬೇಕೆನ್ನುವಷ್ಟರಲ್ಲಿ ಆತ ಕೊನೆಯುಸಿರೆಳೆದಿದ್ದಾನೆ.
ಯುವಕ ಬಿಸಿಲಿನ ತಾಪದಿಂದ ಬಳಲಿ ಸಾವನ್ನಪ್ಪಿರಬಹುದು ಎಂದು ವೈದ್ಯರು ತಿಳಿಸಿದ್ದಾರೆ.
ನಾವು ಸೋಮವಾರದಿಂದ ಏನೂ ತಿಂದಿರಲಿಲ್ಲ. ನಡೆದುಕೊಂಡೇ ಹೋಗಿ ಮನೆ ಸೇರಿಕೊಳ್ಳಲು ನಿರ್ಧರಿಸಿದ್ದೆವು ಎಂದು ಇವರ ಜತೆಯಲ್ಲಿದ್ದವರು ಮಾಹಿತಿ ನೀಡಿದ್ದಾರೆ. ಘಟನೆಯ ಬಗ್ಗೆ ಯುವಕನ ಕುಟುಂಬಸ್ಥರಿಗೆ ಭದ್ರಚಾಲಂ ಅಧಿಕಾರಿಗಳು ಮಾಹಿತಿ ನೀಡಿದ್ದು, ಮೃತದೇಹವನ್ನು ವಾಹನದಲ್ಲಿ ಒಡಿಶಾಗೆ ರವಾನಿಸಿದ್ದಾರೆ.