ಅಹಮದಾಬಾದ್ (ಗುಜರಾತ್): ಧಾರ್ಮಿಕ ಗ್ರಂಥಗಳ ಪ್ರಕಾರ, 'ಗಂಡಂದಿರಿಗೆ ಆಹಾರವನ್ನು ಬೇಯಿಸುವ ಮುಟ್ಟಿನ ಮಹಿಳೆಯರು ತಮ್ಮ ಮುಂದಿನ ಜನ್ಮದಲ್ಲಿ ನಾಯಿಗಳಾಗಿ ಜನಿಸುತ್ತಾರೆ. ಅಂತಹ ಮಹಿಳೆಯರು ತಯಾರಿಸಿದ ಆಹಾರವನ್ನು ಸೇವಿಸುವವರು ದನಗಳಾಗಿ ಮರುಜನ್ಮ ಪಡೆಯುತ್ತಾರೆ' ಎಂದು ಗುಜರಾತ್‌ನ ಭುಜ್‌ನಲ್ಲಿರುವ ಸ್ವಾಮಿನಾರಾಯಣ ದೇವಸ್ಥಾನದ ಸ್ವಾಮಿ ಕೃಷ್ಣಸ್ವರೂಪ್ ದಾಸ್ಜಿ ಧರ್ಮೋಪದೇಶದ ಸಮಯದಲ್ಲಿ ವಿವಾದಿತ ಹೇಳಿಕೆ ನೀಡಿದ್ದಾರೆ.
ಗಮನಾರ್ಹ ಅಂಶವೇನೆಂದರೆ, ಈ ದೇವಾಲಯವು ಭುಜ್ನಲ್ಲಿ ಒಂದು ಕಾಲೇಜನ್ನು ನಡೆಸುತ್ತಿದೆ. ಇಲ್ಲಿರುವ ಹಾಸ್ಟೆಲ್ನಲ್ಲಿ ಮುಟ್ಟಾದ ಯುವತಿಯರು ಇತರೆ ಯುವತಿಯರೊಂದಿಗೆ ಕುಳಿತು ಊಟ ಮಾಡಬಾರದು ಎಂಬ ನಿಯಮವಿದೆ. ಎಲ್ಲಿ ಯುವತಿಯರು ಈ ನಿಯಮ ಮುರಿಯುತ್ತಾರೋ ಎಂದು ಅಲ್ಲಿನ ಮಹಿಳಾ ಸಿಬ್ಬಂದಿ ಮುಟ್ಟಾಗಿದ್ದಾರೆಯೇ ಎಂದು ಪರೀಕ್ಷಿಸಲು 60ಕ್ಕೂ ಹೆಚ್ಚು ಯುವತಿಯರ ಒಳ ಉಡುಪುಗಳನ್ನು ತೆಗೆಯುವಂತೆ ಒತ್ತಾಯಿಸಿದ್ದರು ಎಂಬುದು ಇತ್ತೀಚೆಗೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.
ಫೆಬ್ರವರಿ 11 ರಂದು ಈ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಾಂಶುಪಾಲರು, ಶ್ರೀ ಸಹಜನಂದ್ ಬಾಲಕಿಯರ ಸಂಸ್ಥೆಯ ಅಧಿಕಾರಿಯನ್ನು ಸೋಮವಾರ ಬಂಧಿಸಲಾಗಿದೆ.
'ಮುಟ್ಟಿನ ಮಹಿಳೆಯರು ಬೇಯಿಸಿದ ಆಹಾರವನ್ನು ಸೇವಿಸಿದರೆ ಪುರುಷರು ತಮ್ಮ ಮುಂದಿನ ಜನ್ಮದಲ್ಲಿ ಎತ್ತುಗಳಾಗಿ ಜನಿಸುತ್ತಾರೆ ಎಂಬುದು ಖಚಿತ. ನೀವು ನನ್ನ ಅಭಿಪ್ರಾಯಗಳನ್ನು ಇಷ್ಟಪಡದಿದ್ದರೆ ನನಗೇನೂ ಹೆದರಿಕೆ ಇಲ್ಲ. ಆದರೆ ಇದೆಲ್ಲವನ್ನೂ ನಮ್ಮ ಶಾಸ್ತ್ರಗಳಲ್ಲಿ (ಧರ್ಮಗ್ರಂಥಗಳಲ್ಲಿ) ಬರೆಯಲಾಗಿದೆ. ಮುಟ್ಟಿನ ಮಹಿಳೆ ತನ್ನ ಗಂಡನಿಗೆ ಆಹಾರವನ್ನು ಬೇಯಿಸಿದರೆ ಅವಳು ಖಂಡಿತವಾಗಿಯೂ ಮುಂದಿನ ಜನ್ಮದಲ್ಲಿ ಹೆಣ್ಣು ನಾಯಿಯಾಗಿ ಜನಿಸುತ್ತಾಳೆ' ಹೀಗೆಂದು ಸ್ವಾಮೀಜಿ ಗುಜರಾತಿ ಭಾಷೆಯಲ್ಲಿ ಮಾಡಿರುವ ಭಾಷಣ ವೈರಲ್ ಆಗಿದೆ.
'ಮುಟ್ಟಿನ ಅವಧಿ ತಪಸ್ಸಿನಂತೆ ಎಂದು ಮಹಿಳೆಯರಿಗೆ ತಿಳಿದಿಲ್ಲ. ಇದನ್ನು ನಮ್ಮ ಶಾಸ್ತ್ರಗಳಲ್ಲಿ ಬರೆಯಲಾಗಿದೆ. ಈ ಎಲ್ಲ ಸಂಗತಿಗಳನ್ನು ನಿಮಗೆ ಹೇಳಲು ನಾನು ಇಷ್ಟಪಡುವುದಿಲ್ಲ, ಆದರೆ ನಾನು ನಿಮಗೆ ಎಚ್ಚರಿಕೆ ನೀಡಬೇಕಾಗಿದೆ. ಪುರುಷರು ಅಡುಗೆ ಕಲಿಯಬೇಕು, ಇದು ನಿಮಗೆ ಸಹಾಯ ಮಾಡುತ್ತದೆ' ಎಂದು ಹೇಳಿದ್ದಾರೆ.
ಸ್ವಾಮೀಜಿ ಮಾತನಾಡಿರುವ ವಿಡಿಯೋದ ಸಮಯ ಮತ್ತು ಸ್ಥಳದ ಬಗ್ಗೆ ನಿಖರ ಮಾಹಿತಿ ಇಲ್ಲ. ಧರ್ಮೋಪದೇಶದ ಇಂತಹ ವೀಡಿಯೋಗಳು ದೇವಾಲಯಕ್ಕೆ ಮೀಸಲಾದ ಯೂಟ್ಯೂಬ್ ಚಾನೆಲ್‌ನಲ್ಲಿ ಲಭ್ಯವಿದೆ.