ಕೋಲ್ಕತ್ತಾ/ಪಶ್ಚಿಮ ಬಂಗಾಳ: ಟಿಎಂಸಿ ಕಾರ್ಯಕರ್ತರು ಶೀಘ್ರದಲ್ಲೇ ತಮ್ಮ ಮಾರ್ಗಗಳನ್ನ ಸರಿಪಡಿಸಿಕೊಳ್ಳದಿದ್ದರೆ ಅವರ ಕಾಲು ಮತ್ತು ಪಕ್ಕೆಲುಬುಗಳನ್ನು ಮುರಿದು ಶವಸಂಸ್ಕಾರಕ್ಕೆ ಕಳುಹಿಸಲಾಗುವುದು ಎಂದು ಪಶ್ಚಿಮ ಬಂಗಾಳದ ಬಿಜೆಪಿ ಘಟಕದ ಅಧ್ಯಕ್ಷ ದಿಲೀಪ್ ಘೋಷ್ ಎಚ್ಚರಿಕೆ ನೀಡಿದ್ದಾರೆ.
ಪೂರ್ವ ಮಿಡ್ನಾಪೋರ್ ಜಿಲ್ಲೆಯ ಹಲ್ದಿಯಾ ಪಟ್ಟಣದಲ್ಲಿ ನಡೆದ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಘೋಷ್, ಕೇಂದ್ರ ಸರ್ಕಾರವು 2021 ರ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯು ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆಯಲು ಅನುವು ಮಾಡಿಕೊಡಲಿದೆ. ನಾವು ಅಧಿಕಾರಕ್ಕೆ ಬಂದರೆ ತಮ್ಮ ಪಕ್ಷವು ರಾಜ್ಯದಲ್ಲಿ "ಪ್ರಜಾಪ್ರಭುತ್ವ ಪುನಃ ಸ್ಥಾಪಿಸುತ್ತದೆ" ಎಂದು ಹೇಳಿದರು.
ಇದೇ ವೇಳೆ, ಸಾಮಾನ್ಯ ಜನರನ್ನು ಹಿಂಸಿಸುತ್ತಿರುವ ಟಿಎಂಸಿ ಕಾರ್ಯಕರ್ತರು ಮುಂದಿನ ಆರು ತಿಂಗಳಲ್ಲಿ ತಮ್ಮನ್ನು ತಾವೇ ಸರಿಪಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ಅವರ ಕೈ, ಕಾಲು ಮತ್ತು ಪಕ್ಕೆಲುಬುಗಳು ಮುರಿದುಹೋಗುತ್ತವೆ ಮತ್ತು ಅವರು ಆಸ್ಪತ್ರೆಗೆ ಹೋಗಬೇಕಾಗುತ್ತದೆ "ಎಂದು ಘೋಷ್ ಎಚ್ಚರಿಸಿದ್ದಾರೆ. ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಾರ್ಯಕರ್ತರು ಇನ್ನೂ ತಮ್ಮ ಕಿಡಿಗೇಡಿತನ ಮುಂದುವರಿಸಿದರೆ ಕಾಲು, ಎಲುಬುಗಳನ್ನು ಮುರಿದುಕೊಂಡು ಅವರು ಆಸ್ಪತ್ರೆ ಅಥವಾ ಶವಾಗಾರಕ್ಕೆ ಹೋಗಬೇಕಾಗುತ್ತೆ ಎಂದು ಎಚ್ಚರಿಸಿದ್ರು.
ಇದಕ್ಕೆ ಪ್ರತಿಕ್ರಿಯಿಸಿರುವ ಟಿಎಂಸಿ ಘೋಷ್ ಅವರು ರಾಜ್ಯದ ರಾಜಕೀಯ ವಾತಾವರಣವನ್ನು ಹದಗೆಡಿಸುತ್ತಿದ್ದಾರೆ ಎಂದು ಹೇಳಿದೆ. "ಈ ರೀತಿಯ ಹೇಳಿಕೆಗಳು ಬಿಜೆಪಿ ಭಯೋತ್ಪಾದನೆಯ ಆಳ್ವಿಕೆ ಬಿಚ್ಚಿಡಲು ಮತ್ತು ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ರಾಜ್ಯದ ರಾಜಕೀಯ ವಾತಾವರಣವನ್ನು ಹಾಳುಮಾಡಲು ಪ್ರಯತ್ನಿಸುತ್ತಿದೆ ಎಂಬುದನ್ನ ತೋರಿಸುತ್ತಿದೆ .ಹೀಗಾಗಿ ರಾಜ್ಯದ ಜನತೆ ಅವರಿಗೆ ಸೂಕ್ತವಾದ ಉತ್ತರವನ್ನು ನೀಡಿ ಎಂದು ತೃಣಮೂಲ ಕಾಂಗ್ರೆಸ್ನ ಹಿರಿಯ ಮುಖಂಡ ಮತ್ತು ಸಂಸದ ಸೌಗತಾ ರಾಯ್ ಹೇಳಿದ್ದಾರೆ.