ಇಂಫಾಲ್ (ಮಣಿಪುರ) : ಕಾಂಗ್ರೆಸ್ನಿಂದ ಬಿಜೆಪಿಗೆ ಪಕ್ಷಾಂತರಗೊಂಡಿದ್ದ ಮಣಿಪುರ ವಿಧಾನಸಭೆಯ ಏಳು ಶಾಸಕರ ಅನರ್ಹತೆ ಅರ್ಜಿಯನ್ನು ಸ್ಪೀಕರ್ ಇತ್ಯರ್ಥಪಡಿಸುವವರೆಗೆ ಅವರು ವಿಧಾನಸಭೆಗೆ ಪ್ರವೇಶಿಸಬಾರದು ಎಂದು ಹೈಕೋರ್ಟ್ ಆದೇಶಿಸಿದೆ.
2017 ರ ವಿಧಾನಸಭೆ ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಕಾಂಗ್ರೆಸ್ನಿಂದ ಬಿಜೆಪಿಗೆ ಹಾರಿದ್ದ ಏಳು ಜನ ಶಾಸಕರು ಸರ್ಕಾರ ರಚಿಸುವಲ್ಲಿ ಸಹಕರಿಸಿದ್ದರು. ಹೀಗಾಗಿ ಅವರನ್ನು ಅನರ್ಹ ಮಾಡಬೇಕೆಂದು ಒತ್ತಾಯಿಸಿ 2018ರಲ್ಲಿ ಕಾಂಗ್ರೆಸ್ ಸ್ಪೀಕರ್ ಯಮ್ನಮ್ ಖೇಮ್ಚಂದ್ಗೆ ಮನವಿ ಸಲ್ಲಿಸಿತ್ತು. ಆದರೆ, ಈ ಬಗ್ಗೆ ಸ್ಪೀಕರ್ ಇದುವರೆಗೂ ಯಾವುದೇ ತೀರ್ಮಾನ ಕೈಗೊಂಡಿರಲಿಲ್ಲ. ಹೀಗಾಗಿ ಕೋರ್ಟ್ ಈ ಏಳು ಜನ ಶಾಸಕರು ಸ್ಪೀಕರ್ ತಮ್ಮ ಮುಂದಿರುವ ಅನರ್ಹತೆ ಅರ್ಜಿ ಇತ್ಯರ್ಥಪಡಿಸುವವರೆಗೂ ಸದನ ಪ್ರವೇಶಿಸದಂತೆ ಆದೇಶಿಸಿದೆ.
ಇದಕ್ಕೂ ಮೊದಲು ತನ್ನ ಅಪರೂಪದ ತೀರ್ಪಿನಲ್ಲಿ ಸುಪ್ರೀಂಕೋರ್ಟ್ ರಾಜ್ಯ ಅರಣ್ಯ ಸಚಿವರಾಗಿದ್ದ ಶ್ಯಾಮ್ ಕುಮಾರ್ ಅವರನ್ನು ಆ ಸ್ಥಾನದಿಂದ ತೆಗೆದು ಹಾಕಿತ್ತು. ಶ್ಯಾಮ್ ಕುಮಾರ್ ಕೂಡ ಕಾಂಗ್ರೆಸ್ ಪಕ್ಷದಿಂದ ಚುನಾವಣೆಯಲ್ಲಿ ಗೆದ್ದು ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದರು.