ಕೋಲ್ಕತಾ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಕಾನೂನುಗಳನ್ನು ತಕ್ಷಣ ಹಿಂತೆಗೆದುಕೊಳ್ಳಬೇಕು. ಇಲ್ಲದಿದ್ದರೆ ದೇಶಾದ್ಯಂತ ಆಂದೋಲನವನ್ನೇ ನಡೆಸಬೇಕಾಗುತ್ತದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಬೆದರಿಕೆ ಹಾಕಿದ್ದಾರೆ.
ಸರಣಿ ಟ್ವೀಟ್ ಮಾಡುವ ಮೂಲಕ ಮಮತಾ ಬ್ಯಾನರ್ಜಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ರೈತರ ಬಗ್ಗೆ ನನಗೆ ತುಂಬಾ ಕಾಳಜಿ ಇದೆ. ಕೃಷಿ ಕಾನೂನು ಜಾರಿಗೆ ತರುವ ಮೂಲಕ ಕೇಂದ್ರ ಸರ್ಕಾರ ರೈತರಿಗೆ ಮರಣ ಶಾಸನ ಬರೆಯಲು ಮುಂದಾಗಿದೆ. ತರಾತುರಿಯಲ್ಲಿ ತಂದ ತಿದ್ದುಪಡಿಗಳ ಬಗ್ಗೆ ನಾವು ಮೊದಲಿನಿಂದಲೂ ಬಲವಾಗಿ ವಿರೋಧಿಸುತ್ತಾ ಬಂದಿದ್ದೇವೆ. ಈಗಲೂ ನಮ್ಮ ವಿರೋಧವಿದೆ. ಹಾಗಾಗಿ ರೈತರ ವಿರೋಧಿ ಮಸೂದೆಗಳನ್ನು ಕೇಂದ್ರ ಸರ್ಕಾರ ತಕ್ಷಣ ಹಿಂತೆಗೆದುಕೊಳ್ಳಬೇಕು. ಹಿಂತೆಗೆದುಕೊಳ್ಳದಿದ್ದರೆ, ನಾವು ರಾಜ್ಯ ಮತ್ತು ದೇಶದಾದ್ಯಂತ ಆಂದೋಲನ ನಡೆಸುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಬಿಜೆಪಿ ನನ್ನನ್ನು ಬಂಧಿಸಿದ್ರೂ ಕೂಡ ಜೈಲಿನಲ್ಲಿದ್ದೇ ಚುನಾವಣೆ ಗೆಲ್ಲುತ್ತೇನೆ : ಮಮತಾ ಬ್ಯಾನರ್ಜಿ
ಕೇಂದ್ರ ಸರ್ಕಾರ ಇಂದು ದೆಹಲಿಯಲ್ಲಿ ಪ್ರತಿಭಟನಾನಿರತ ರೈತ ಪ್ರತಿನಿಧಿಗಳೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮಮತಾ ಬ್ಯಾನರ್ಜಿ ಈ ಟ್ವೀಟ್ ಮಾಡಿದ್ದಾರೆ. ನಾವು ಡಿ. 4, ಶುಕ್ರವಾರದಂದು ಸಭೆ ಕರೆದಿದ್ದೇವೆ. ಅಗತ್ಯ ಸರಕುಗಳ ಕಾಯ್ದೆ ಸಾಮಾನ್ಯ ಜನರ ಮೇಲೆ ಹೇಗೆ ಪರಿಣಾಮ ಬೀರುತ್ತಿದೆ ಮತ್ತು ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಲು ಹೇಗೆ ಕಾರಣವಾಗುತ್ತದೆ ಎಂದು ಚರ್ಚಿಸುತ್ತೇವೆ. ಕೇಂದ್ರ ಸರ್ಕಾರ ರೈತರ ವಿರೋಧಿ ಕಾನೂನನ್ನು ಹಿಂತೆಗೆದುಕೊಳ್ಳಬೇಕು ಎಂದು ಮಮತಾ ಬ್ಯಾನರ್ಜಿ ಮತ್ತೊಂದು ಟ್ವೀಟ್ನಲ್ಲಿ ಒತ್ತಾಯಿಸಿದ್ದಾರೆ.