ಕೋಲ್ಕತ್ತಾ: ರಸ್ತೆ ಬದಿ ನಿಂತು 'ಜೈ ಶ್ರೀರಾಮ' ಎಂದು ಘೋಷಣೆ ಕೂಗಿದವರನ್ನು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಪಶ್ಚಿಮ ಮಿಡ್ನಾಪುರ ಜಿಲ್ಲೆಯ ಚಂದ್ರಕೊನಾಗೆ ರಸ್ತೆ ಮಾರ್ಗದ ಮೂಲಕ ಮಮತಾ ತೆರಳುತ್ತಿದ್ದರು. ಈ ವೇಳೆ ದಿದಿ ತೆರಳುತ್ತಿದ್ದ ಮಾರ್ಗ ಮಧ್ಯದಲ್ಲಿ ಕೆಲವರು 'ಜೈ ಶ್ರೀರಾಮ' ಎಂದು ಘೋಷಣೆ ಕೂಗಿದ್ದಾರೆ. ಇದರಿಂದ ಕೋಪಗೊಂಡ ದಿದಿ ತಕ್ಷಣವೇ ಕಾರಿನಿಂದ ಇಳಿದಿದ್ದಾರೆ. ಬಳಿಕ ಘೋಷಣೆ ಕೂಗಿದವರು ಅಲ್ಲಿಂದ ಓಡಿ ಹೋಗಿದ್ದಾರೆ. ಅದನ್ನು ಕಂಡು, ಬಿಜೆಪಿ ಕಾರ್ಯಕರ್ತರೇ ಏಕೆ ಓಡುವಿರಿ, ನನ್ನ ಎದುರಿಸಿ ಎಂದು ಬೈದಿದ್ದಾರೆ.
ಜೈ ಶ್ರೀ ರಾಮ ಎಂದು ಘೋಷಣೆ ಕೂಗಿದವರನ್ನು ಮಮತಾ ಬೈದಿರುವ ವಿಡಿಯೋವನ್ನು ಪಶ್ಚಿಮ ಬಂಗಾಳದ ಬಿಜೆಪಿ ಘಟಕವು ಟ್ವೀಟ್ ಮಾಡಿದೆ. 'ಜೈ ಶ್ರೀ ರಾಮ ಘೋಷಣೆಯಿಂದ ದಿದಿ ಕೋಪಗೊಂಡಿದ್ದೇಕೆ'? ಎಂದು ಬಿಜೆಪಿ ಪ್ರಶ್ನಿಸಿದೆ.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಹಾಗೂ ಟಿಎಂಸಿ ನಾಯಕರ ಮಧ್ಯೆ ವಾಕ್ ಪ್ರಹಾರ ನಡೆಯುತ್ತಿದೆ.