ಹೈದರಾಬಾದ್ : ವಿಶ್ವಾದ್ಯಂತ ಜುಲೈ 12 ಅನ್ನು ಮಲಾಲಾ ದಿನವಾಗಿ ಆಚರಿಸಲಾಗುತ್ತದೆ. ಪಾಕಿಸ್ತಾನದ ಬಾಲ ಕಾರ್ಯಕರ್ತೆ ಮಲಾಲಾ ಯೂಸಫ್ ಜೈ ಅವರ ಶಿಕ್ಷಣದ ಹೋರಾಟವನ್ನು ಎತ್ತಿ ಹಿಡಿಯಲು ವಿಶ್ವಸಂಸ್ಥೆಯು ಈ ದಿನವನ್ನು ಆಚರಿಸುತ್ತಿದೆ.
ಜುಲೈ 12, 2013 ರಂದು, ಮಹಿಳಾ ಶಿಕ್ಷಣದ ಪ್ರಚಾರದಲ್ಲಿ ತೊಡಗಿರುವ ಹದಿನಾರು ವರ್ಷದ ಪಾಕಿಸ್ತಾನಿ ಬಾಲಕಿ ಮಲಾಲಾ ಯೂಸಫ್‌ಜೈ, ವಿಶ್ವಸಂಸ್ಥೆಯ (ಯುಎನ್) ಕೇಂದ್ರ ಕಚೇರಿಯಲ್ಲಿ ಶಿಕ್ಷಣದಲ್ಲಿ ಲಿಂಗ ಸಮಾನತೆಯ ಅಗತ್ಯತೆಯ ಬಗ್ಗೆ ಉತ್ಸಾಹ ಭರಿತ ಭಾಷಣ ಮಾಡಿದರು. ಜುಲೈ 12 ಮಲಾಲಾಳ ಜನ್ಮದಿನವೂ ಆಗಿದೆ. ಯುವ ಕಾರ್ಯಕರ್ತೆಯ ಹೋರಾಟಕ್ಕೆ ಗೌರವಾರ್ಥವಾಗಿ ಯುಎನ್ ಈ ದಿನವನ್ನು ಮಲಾಲಾ ದಿನವೆಂದು ಘೋಷಿಸಿತು.
ಮಲಾಲಾ ಯೂಸಫ್‌ಜೈ ಜುಲೈ 12, 1997 ರಂದು ಪಾಕಿಸ್ತಾನದ ಖೈಬರ್ ಪಖ್ತೂನ್ಖ್ವಾ ಪ್ರಾಂತ್ಯದ ಸ್ವಾತ್ ಕಣಿವೆಯ ಅತಿದೊಡ್ಡ ನಗರವಾದ ಮಿಂಗೋರಾದಲ್ಲಿ ಜನಿಸಿದರು. ಅವರು ಜಿಯಾವುದ್ದೀನ್ ಮತ್ತು ಟಾರ್ ಪೆಕೈ ಯೂಸಫ್‌ಜೈ ಅವರ ಪುತ್ರಿ. ಮಿಂಗೋರ ಗ್ರಾಮದ ಒಂದು ಶಾಲೆಯ ವಿದ್ಯಾರ್ಥಿನಿ ಮತ್ತು ಶಿಕ್ಷಣ ಕಾರ್ಯಕರ್ತೆ. ಹೆಣ್ಣುಮಕ್ಕಳು ಶಾಲೆಗೆ ಹೋಗುವುದನ್ನು ತಾಲಿಬಾನ್ ಸಂಘಟನೆಯು ನಿಷೇಧಿಸಿರುವ ಸ್ವಾತ್ ಕಣಿವೆಯಲ್ಲಿನ ಹುಡುಗಿಯರ ಶಿಕ್ಷಣ ಮತ್ತು ಮಹಿಳಾ ಹಕ್ಕುಗಳ ಪರ ತನ್ನ ಕ್ರಿಯಾತ್ಮಕ ಹೋರಾಟಕ್ಕಾಗಿ ಮಲಾಲಾ ಪ್ರಸಿದ್ಧಿ ಪಡೆದಳು.
ಮಲಾಲಾ ಯೂಸಫ್‌ಜೈ ಪಾಕಿಸ್ತಾನದಲ್ಲಿ ಸ್ತ್ರೀ ಶಿಕ್ಷಣದ ಮೇಲೆ ತಾಲಿಬಾನ್ ನಿರ್ಬಂಧಗಳನ್ನು ವಿರೋಧಿಸಿದ್ದಕ್ಕಾಗಿ 2012 ರಲ್ಲಿ 2012 ರ ಅಕ್ಟೋಬರ್ 9 ರಂದು ತೆಹ್ರಿಕ್-ಇ-ತಾಲಿಬಾನ್ ಪಾಕಿಸ್ತಾನ (ಟಿಟಿಪಿ) ದಿಂದ ಈಕೆಯ ಮೇಲೆ ಗುಂಡಿನ ದಾಳಿ ನಡೆಯಿತು. ಇದಕ್ಕೆ ವಿಶ್ವಾದ್ಯಂತ ಖಂಡನೆ ವ್ಯಕ್ತವಾಯಿತು. ಪಾಕಿಸ್ತಾನದಲ್ಲಿ, 2 ದಶಲಕ್ಷಕ್ಕೂ ಹೆಚ್ಚು ಜನರು ಶಿಕ್ಷಣ ಹಕ್ಕಿನ ಅರ್ಜಿಗೆ ಸಹಿ ಹಾಕಿದರು. ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿ ಮೊದಲ ಉಚಿತ ಮತ್ತು ಕಡ್ಡಾಯ ಶಿಕ್ಷಣ ಮಸೂದೆಯನ್ನು ಅಂಗೀಕರಿಸಿತು.
2012 ರಲ್ಲಿ ಪಾಕಿಸ್ತಾನ ಸರ್ಕಾರ ಆಕೆಗೆ ಮೊದಲ ರಾಷ್ಟ್ರೀಯ ಯುವ ಶಾಂತಿ ಪ್ರಶಸ್ತಿಯನ್ನು ನೀಡಿತು. ಡಿಸೆಂಬರ್ 2014 ರಲ್ಲಿ, ಅತ್ಯಂತ ಕಿರಿಯ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತಳಾದಳು. ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಅವರು ಮಲಾಲಾಳನ್ನು 2017 ರಲ್ಲಿ ವಿಶ್ವಸಂಸ್ಥೆಯ ಶಾಂತಿ ಸಂದೇಶವಾಹಕ ಹುದ್ದೆಗೆ ಮಲಾಲಾಳನ್ನು ನೇಮಿಸಿದರು. ಇತ್ತೀಚೆಗೆ ಜೂನ್ 2020 ರಲ್ಲಿ ಮಲಾಲಾ ಯೂಸಫ್‌ಜೈ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ಪದವಿ ಪಡೆದರು.
ಪಾಕಿಸ್ತಾನದ ಧೀರ ಬಾಲಕಿ ಮಲಾಲಾ ಜೀವನಾಧಾರಿತ ಸಿನಿಮಾ ‘ಗುಲ್ ಮಕಾಯ್’ ಜನವರಿ 31, 2020 ರಂದು ಬಿಡುಗಡೆಯಾಯಿತು.