ಕೊಲ್ಹಾಪುರ (ಮಹಾರಾಷ್ಟ್ರ): ಪಶ್ಚಿಮ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಲ್ಲಿ ಪಂಚಗಂಗಾ ನದಿ ಅಪಾಯದ ಮಟ್ಟ ದಾಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಧನಗರಿ ಅಣೆಕಟ್ಟಿನ ಜಲಾನಯನ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿದ್ದಂತೆ, ನೀರನ್ನು ಬಿಡುಗಡೆ ಮಾಡಲಾಗಿದೆ. ಇದು ನದಿಯ ಮಟ್ಟ ಏರಿಕೆಗೆ ಕಾರಣವಾಗಿದೆ ಎಂದು ಅವರು ಹೇಳಿದರು.
23 ಹಳ್ಳಿಗಳಿಂದ ಸುಮಾರು 1,750 ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಕೊಲ್ಹಾಪುರ ನಗರದ ಹೊರಗಿನ ರಾಜಾರಾಮ್ ವೀರ್‌ನಲ್ಲಿ 43 ಅಡಿಗಳಷ್ಟು ಅಂದರೆ ಅಪಾಯದ ಮಟ್ಟ ಮೀರಿ ಈ ನದಿ ಹರಿಯುತ್ತಿದೆ.
"ಗದಿಂಗ್ಲಾಸ್, ಪನ್ಹಾಲಾ, ಕಾರ್ವೀರ್, ಗಗನ್ಬಾವ್ಡಾ, ಅಜಾರಾ, ಮತ್ತು ಕೊಲ್ಹಾಪುರ ನಗರದ 23 ಗ್ರಾಮಗಳ 1,750 ಕುಟುಂಬಗಳಿಂದ ಈವರೆಗೆ 4,413 ಜನರನ್ನು ಸ್ಥಳಾಂತರಿಸಲಾಗಿದೆ" ಎಂದು ಜಿಲ್ಲಾಧಿಕಾರಿ ದೌಲತ್ ದೇಸಾಯಿ ತಿಳಿಸಿದ್ದಾರೆ. ಸುಮಾರು 1,100 ಜಾನುವಾರುಗಳನ್ನು ಕೂಡಾ ಸ್ಥಳಾಂತರಿಸಲಾಗಿದೆ.