ಲಕ್ನೋ (ಉತ್ತರ ಪ್ರದೇಶ): ಅಂಬೇಡ್ಕರ್ ನಗರ ಜಿಲ್ಲೆಯ ತಾಂಡಾ ಪ್ರದೇಶದ 22 ವರ್ಷದ ಯುವಕನಿಗರ ಲಾಕ್ ಡೌನ್ ಉಲ್ಲಂಘಿಸಿದ್ದಕ್ಕಾಗಿ ಪೊಲೀಸರು ಥಳಿಸಿದ್ದರಿಂದ ಆತ ಸಾವನ್ನಪ್ಪಿದ್ದಾನೆ ಎಂಬ ಹೇಳಿಕೆಯನ್ನು ಪೊಲೀಸರು ತಿರಸ್ಕರಿಸಿದ್ದಾರೆ. ಆ ವ್ಯಕ್ತಿ ತನ್ನ ಬೈಕ್ನಿಂದ ಬಿದ್ದು ಗಂಭೀರವಾಗಿ ಗಾಯಗೊಂಡು, ಬಳಿಕ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಮೃತನನ್ನು ರಿಜ್ವಾನ್ ಎಂದು ಗುರುತಿಸಲಾಗಿದ್ದು, ಆತ ಕಳೆದ ಶುಕ್ರವಾರ ಮೃತಪಟ್ಟಿದ್ದಾನೆ. ತಾಂಡಾ ಪೊಲೀಸ್ ಠಾಣೆಯ ಎಸ್‌ಎಚ್‌ಒ ಸಂಜಯ್ ಕುಮಾರ್ ಪಾಂಡೆ, ರಿಜ್ವಾನ್ ಬೈಕ್ನಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಎಂದು ಹೇಳಿದ್ದಾರೆ.
"ಐದು ದಿನಗಳ ಹಿಂದೆ ರಿಜ್ವಾನ್ ಬೈಕ್ನಿಂದ ಬಿದ್ದು ಗಾಯಗೊಂಡಿದ್ದ. ಆತನನ್ನು ಕುಟುಂಬ ಸದಸ್ಯರು ಆಸ್ಪತ್ರೆಗೆ ಕರೆದೊಯ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಆರ್ಥೋ(ಮೂಳೆ) ವೈದ್ಯರಲ್ಲಿಗೆ ಕರೆದೊಯ್ದರು. ಅಲ್ಲಿಂದ ವೈದ್ಯರು ಏಪ್ರಿಲ್ 17ರಂದು ಗಾಯಾಳುವನ್ನು ಜಿಲ್ಲಾ ಆಸ್ಪತ್ರೆಗೆ ಕಳುಹಿಸಿ ಎಕ್ಸ್-ರೇ ವರದಿಯನ್ನು ಪಡೆಯಲು ಹೇಳಿದರು. ಆದರೆ ಏಪ್ರಿಲ್ 17ರ ರಾತ್ರಿ ರಿಜ್ವಾನ್ ಮೃತಪಟ್ಟಿದ್ದಾನೆ. ಐದು ದಿನಗಳ ಹಿಂದೆ ರಿಜ್ವಾನ್ ಗಾಯಗೊಂಡಿದ್ದು, ಸೆಪ್ಟಿಸೆಮಿಯಾದಿಂದ ಬಳಲುತ್ತಿದ್ದ ಎಂದು ವೈದ್ಯರು ತಿಳಿಸಿದ್ದಾರೆ" ಎಂದು ಸಂಜಯ್ ಕುಮಾರ್ ಪಾಂಡೆ ಹೇಳಿದ್ದಾರೆ.
"ರಿಜ್ವಾನ್ ಪೊಲೀಸರ ಥಳಿತದಿಂದ ಸಾವನ್ನಪ್ಪಿದ್ದಾನೆ ಎಂದು ಕೆಲವರು ಆರೋಪಿಸಿದ್ದಾರೆ. ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದ್ದು, ಪೊಲೀಸರು ಹೊಡೆದ ಬಗ್ಗೆ ಯಾವುದೇ ಪುರಾವೆಗಳು ಕಂಡುಬಂದಿಲ್ಲ. ಮೃತ ವ್ಯಕ್ತಿ ಅಪಘಾತದಲ್ಲಿ ಗಾಯಗೊಂಡು ಬಳಿಕ ಮೃತಪಟ್ಟಿದ್ದಾನೆ. ಆತ ಸೆಪ್ಟಿಸೆಮಿಯಾ ಮತ್ತು ಶ್ವಾಸಕೋಶದ ಸೋಂಕಿನಿಂದಲೂ ಬಳಲುತ್ತಿದ್ದನೆಂದು ವೈದ್ಯರು ಹೇಳಿದ್ದಾರೆ" ಎಂದು ಎಸ್‌ಎಚ್‌ಒ ಸಂಜಯ್ ಕುಮಾರ್ ತಿಳಿಸಿದ್ದಾರೆ.