ಕೊಜಿಕೊಡ್ (ಕೇರಳ): ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಮನೆಯಿಂದ ಹೊರಬರುವವರ ಮೇಲೆ ಪೊಲೀಸರು ಪ್ರಕರಣ ದಾಖಲಿಸುತ್ತಿದ್ದಾರೆ. ಕೋಜಿಕೋಡ್‌ನಲ್ಲಿ ಪ್ರೀತಿಸುತ್ತಿದ್ದ ಜೋಡಿಯೊಂದು ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಪರಾರಿಯಾಗಿದೆ.
ಕೆಲ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಜೋಡಿಯ ವಿವಾಹಕ್ಕೆ ಎರಡೂ ಕುಟುಂಬಗಳಿಂದ ವಿರೋಧ ವ್ಯಕ್ತವಾಗಿದೆ. ಇವರಿಬ್ಬರು ಬೇರೆ ಬೇರೆ ಧರ್ಮಕ್ಕೆ ಸೇರಿರುವುದು ಇದಕ್ಕೆ ಕಾರಣವಾಗಿತ್ತು. ಆದರೆ ಕಳೆದ ಶನಿವಾರ ಇಬ್ಬರೂ ಮನೆ ಬಿಟ್ಟು ಓಡಿಹೋಗಿದ್ದಾರೆ. ಈ ವೇಳೆ ಹುಡುಗಿಯ ತಂದೆ ಮಗಳು ಕಾಣೆಯಾಗಿರುವ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ಪರಿಶೀಲಿಸಿದ ಪೊಲೀಸರು, ಹುಡುಗನಿಗೆ 23 ವರ್ಷ ಹಾಗೂ ಹುಡುಗಿಗೆ 21 ವರ್ಷ ತುಂಬಿದ್ದು, ಇಬ್ಬರು ಮದುವೆಯಾಗಲು ಅರ್ಹರು ಎಂದು ತಿಳಿಸಿದ್ದಾರೆ. ಹೀಗಾಗಿ ಯುವತಿಯ ಪೋಷಕರು ಕಂಗಾಲಾಗಿದ್ದಾರೆ.
ಲಾಕ್‌ಡೌನ್ ಉಲ್ಲಂಘಿಸಿದ್ದಕ್ಕೆ ಕೇಸ್:
ಕೇರಳದಲ್ಲಿ ಲಾಕ್‌ಡೌನ್ ನಿಯಮ ಕಠಿಣವಾಗಿದ್ದು, ಯಾವುದೇ ಕಾರಣಕ್ಕೂ ಒಟ್ಟಿಗೆ ಕಾಣಿಸಿಕೊಳ್ಳುವಂತಿಲ್ಲ ಎಂದು ಆದೇಶಿಸಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಒಟ್ಟಿಗೆ ಓಡಿಹೋಗಿದ್ದು ಲಾಕ್‌ಡೌನ್ ನಿಯಮದ ಉಲ್ಲಂಘನೆ. ಪರಿಣಾಮ ಇಬ್ಬರು ಪ್ರೇಮಿಗಳ ಮೇಲೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 188, ಸೆಕ್ಷನ್ 269 ಅಡಿಯಲ್ಲಿ ಪೊಲೀಸರು ದೂರು ದಾಖಲಿಸಿದ್ದಾರೆ.