ಕನ್ನೂರು(ಕೇರಳ): ಕೇರಳದ ಕನ್ನೂರಿನ ಪೆರಿಯಾಚೂರ್ ಪ್ರದೇಶದಲ್ಲಿ ವಾಸವಾಗಿರುವ ಭಾಸ್ಕರ್‌ನ ಕುಟುಂಬ ತಮಗೆ ಸಿಕ್ಕ ಲಾಕ್ಡೌನ್ ಸಮಯ ಅತ್ಯಂತ ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಂಡಿದೆ. ಮನೆಯ ಹಿತ್ತಲಿನಲ್ಲಿದ್ದ ಜಾಗದಲ್ಲಿ ಬಾವಿ ತೆಗೆಯಲು ಶುರು ಮಾಡಿದ್ದು, ಕೇವಲ 18.8 ಅಡಿ ಆಳದಲ್ಲೇ ನೀರು ಉಕ್ಕಿ ಹರಿದಿದೆ.
ಬಾವಿ ತೆಗೆಯುವ ಕೆಲಸದಲ್ಲಿ ಬಾಸ್ಕರ್, ಆತನ ಸಹೋದರಿ ಹಾಗೂ ಮಕ್ಕಳು ಭಾಗಿಯಾಗಿದ್ದು, ಇವರ ಶ್ರಮಕ್ಕೆ ಫಲ ಸಿಕ್ಕಿದೆ. ಬೇಸಿಗೆ ಸಮಯದಲ್ಲಿ ಸರಿಯಾಗಿ ನೀರು ಸಿಗದೇ ಈ ಕುಟುಂಬ ತೊಂದರೆ ಅನುಭವಿಸುವಂತಾಗಿತ್ತು. ಆದರೆ ಇದೀಗ ಅವರ ಮನೆ ಹಿತ್ತಲಿನಲ್ಲಿ ಗಂಗೆ ಉಕ್ಕಿ ಹರಿದಿರುವುದು ಸಂತಸ ಇಮ್ಮಡಿಗೊಳಿಸಿದೆ.
ಈ ವಿಷಯವಾಗಿ ಈಟಿವಿ ಭಾರತ ಜತೆ ಮಾತನಾಡಿರುವ ಬಾಸ್ಕರ್, ಬೇಸಿಗೆ ಸಮಯದಲ್ಲಿ ಬೇರೆಯವರ ಹಿತ್ತಲಿನಲ್ಲಿದ್ದ ಬಾವಿಗಳಿಂದ ನೀರು ತೆಗೆದುಕೊಂಡು ಬರಬೇಕಾಗಿತ್ತು. ಆದರೆ ಇದೀಗ ನಮ್ಮ ಕೆಲಸದ ಬಗ್ಗೆ ಹೆಮ್ಮೆ ಇದೆ ಎಂದಿದ್ದಾರೆ. ಇದೀಗ 18.8 ಅಡಿ ಆಳ ತೆಗೆದಿರುವ ಬಾವಿಗೆ ಗೋಡೆ ನಿರ್ಮಾಣ ಮಾಡಲು ಈ ಕುಟುಂಬ ಯೋಜನೆ ರೂಪಿಸುತ್ತಿದೆ ಎಂದು ತಿಳಿದು ಬಂದಿದೆ.