ಪ್ರಧಾನಿ ನರೇಂದ್ರ ಮೋದಿ ಅವರು ಕೊರೊನ ವೈರಸ್ ಸವಾಲನ್ನು ನಿಭಾಯಿಸಲು ದಕ್ಷಿಣ ಏಷ್ಯಾ ಪ್ರಾದೇಶಿಕ ತಂತ್ರ ರೂಪಿಸಬೇಕು ಎಂದು ಒತ್ತಾಯಿಸಿ ದಿಢೀರನೆ ಟ್ವೀಟ್ ಮಾಡಿದ್ದರು. ಅದಾದ ಎರಡು ದಿನಗಳ ಬಳಿಕ ಅಂದರೆ ಮಾರ್ಚ್ 16ರಂದು ಎಂಟು ಸಾರ್ಕ್ ಸದಸ್ಯ ರಾಷ್ಟ್ರಗಳ ಉನ್ನತ ನಾಯಕರು ಭಾರತ ನೇತೃತ್ವದ ವಿಡಿಯೋ ಕಾನ್ಫರೆನ್ಸಿಂಗ್ ಸಭೆಯಲ್ಲಿ ಭಾಗವಹಿಸಿದರು. ಪಾಕಿಸ್ತಾನ ಹೊರತು ಪಡಿಸಿ ಎಲ್ಲಾ ಸಾರ್ಕ್ ಸದಸ್ಯ ದೇಶಗಳಲ್ಲಿ ಆಳ್ವಿಕೆ ನಡೆಸುತ್ತಿರುವ ಸರ್ಕಾರಗಳ ಮುಖ್ಯಸ್ಥರು (ಪ್ರಧಾನಿಗಳು) ಮತ್ತು ಆಯಾ ದೇಶಗಳ ಮುಖ್ಯಸ್ಥರು (ಅಧ್ಯಕ್ಷರು) ಒಂದೂವರೆ ಗಂಟೆ ಅವಧಿಯ ಕಾನ್ಫರೆನ್ಸಿನಲ್ಲಿ ಮಾತನಾಡಿದರು.
ಪಾಕಿಸ್ತಾನದ ಪರವಾಗಿ ಕಿರಿಯ ಆರೋಗ್ಯ ಸಚಿವ ಜಾಫರ್ ಮಿರ್ಜಾ ಅವರು ಪ್ರಧಾನಿ ಇಮ್ರಾನ್ ಖಾನ್ ಅವರ ವಿಶೇಷ ಪ್ರತಿನಿಧಿಯಾಗಿ ಭಾಗವಹಿಸಿದ್ದರು. ವಿಷಯ ಕುರಿತು ಮೊದಲು ಪ್ರಸ್ತಾಪವಾದದ್ದು ಶುಕ್ರವಾರದಂದು. ಹಾಗೆ ಪ್ರಸ್ತಾಪಿಸಿ ಒಂದು ಅಥವಾ ಎರಡು ಗಂಟೆ ಕಳೆಯುವುದರೊಳಗೆ ಪ್ರಾದೇಶಿಕ ನಾಯಕರು ಸಮ್ಮತಿ ಸೂಚಿಸಿದರು. ಶನಿವಾರ ಸಂಜೆಯ ಹೊತ್ತಿಗೆ ಭಾರತ ಚರ್ಚೆ ಕುರಿತು ಸ್ಪಷ್ಟ ಚಿತ್ರಣ ಒದಗಿಸಿತು. ಭಾನುವಾರ ಉನ್ನತ ಮಟ್ಟದ ವೀಡಿಯೊ ಕಾನ್ಫರೆನ್ಸಿಂಗ್ ಯಶಸ್ವಿಯಾಗಿ ನಡೆಯಿತು.
ಉನ್ನತ ಅಧಿಕೃತ ಮೂಲವೊಂದು ತಿಳಿಸಿರುವಂತೆ ಹೆಚ್ಚು ಜನಸಾಂದ್ರತೆ ಇರುವ ಸಾರ್ಕ್ ಪ್ರದೇಶದಲ್ಲಿ ಇದುವರೆಗೆ ಕೇವಲ 150 ಕೊರೊನಾ ಪ್ರಕರಣಗಳು ಧನಾತ್ಮಕವಾಗಿ ವರದಿಯಾಗಿವೆ. ಅಲ್ಲದೆ ಸಾರ್ಕ್ ಪ್ರದೇಶ ಜಾಗರೂಕರಾಗಿರಬೇಕು. ಪರಿಣಾಮ ಎದುರಿಸುವುದಕ್ಕಿಂತಲೂ ಕೆಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಒಳಿತು.
ಪ್ರಾದೇಶಿಕ ಸಂದರ್ಭದಲ್ಲಿ ಮೊಟ್ಟ ಮೊದಲಿಗೆ ಒಂದೆ ರೀತಿಯ ಗಡಿ, ಸಡಿಲ ಗಡಿಗಳು ಹಾಗೂ ಒಂದೆ ಬಗೆಯ ಸ್ಥಿತಿಯಂತಹ ಕೆಲ ಸಾಮಾನ್ಯ ಸಂಗತಿಗಳ ಕಾರಣಕ್ಕೆ ಮತ್ತು ಒಂದು ಮಟ್ಟದ ಸಹಕಾರ ಪರಸ್ಪರರಲ್ಲಿ ಇರಬೇಕು ಎಂಬ ಉದ್ದೇಶಕ್ಕೆ ನಾವು ನೆರೆ ಹೊರೆಯ ದೇಶಗಳಲ್ಲಿ ಜಾಗೃತಿ ಮೂಡಿಸಲು ಮುಂದಾದೆವು ಎಂದಿದ್ದಾರೆ. ಅಸಮರ್ಪಕ ಸಂಪನ್ಮೂಲಗಳಿಂದ ಕೂಡಿದ ಮಾಲ್ಡೀವ್ಸ್ನ ಸಣ್ಣ ರಾಷ್ಟ್ರ ಇರಲಿ ಅಥವಾ ಇಟಲಿ, ಚೀನಾ, ಆಫ್ಘಾನಿಸ್ತಾನದಿಂದ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುವ ಶ್ರೀಲಂಕಾ, ನೇಪಾಳದಂತಹ ದೇಶಗಳೇ ಇರಲಿ, ಕೋವಿಡ್ 19 ಸಂದರ್ಭದಲ್ಲಿ ಸಾರ್ಕ್ನ ಪ್ರತಿಯೊಂದು ದೇಶ ಕೂಡ ವಿಭಿನ್ನ ಸಮಸ್ಯೆ ಎದುರಿಸುತ್ತಿದೆ. ಸಾರ್ಕ್ ಕೆಲ ದೇಶಗಳ ಪರಸ್ಪರ ಮಾತುಕತೆ ಸ್ಥಗಿತಗೊಂಡಿದ್ದರೂ ಕೂಡ ಈ ದೇಶಗಳು ಸೋಂಕು ಹರಡುತ್ತಿರುವ ಸಂದರ್ಭದಲ್ಲಿ ಕೆಲಮಟ್ಟಿನ ಸಹಕಾರಕ್ಕೆ ಮುಂದಾಗುವ ಅವಶ್ಯಕತೆ ಇದೆ ಎನ್ನುತ್ತಾರೆ ಅಧಿಕಾರಿಗಳು.
ಆದರೆ 2016ರಲ್ಲಿ ಉರಿ ದಾಳಿ ನಡೆದ ಬಳಿಕ ಪಾಕಿಸ್ತಾನ ನೇತೃತ್ವ ವಹಿಸಿದ್ದ ಸಾರ್ಕ್ ಶೃಂಗಸಭೆಯನ್ನು ಭಾರತ ಬಹಿಷ್ಕರಿಸಿತ್ತು. ಅಂದಿನಿಂದ ಈವರೆಗೆ ಸಾರ್ಕ್ ಪ್ರಕ್ರಿಯೆಗಳು ಸ್ಥಗಿತಗೊಂಡಿದ್ದು, ರಾಜಕೀಯ ಮಾತುಕತೆ ಆರಂಭಿಸಲು ಇದು ಸಕಾಲವಲ್ಲ ಎಂಬ ಅಭಿಪ್ರಾಯ ಇದೆ. ಮೂಲಗಳು ತಿಳಿಸುವಂತೆ ಭಾರತ ನೀಡಿದ್ದ ಆಹ್ವಾನಕ್ಕೆ ಪಾಕಿಸ್ತಾನ ಮೊದಲು ಸ್ವೀಕಾರಾತ್ಮಕ ಮತ್ತು ಸಕಾರಾತ್ಮಕ ಪ್ರತಿಕ್ರಿಯೆ ನೀಡಿದರೂ ಬಳಿಕ ವೀಡಿಯೊ ಕಾನ್ಫರೆನ್ಸಿಂಗ್ನಲ್ಲಿ ಇಮ್ರಾನ್ ಖಾನ್ ಪಾಲ್ಗೊಳ್ಳದೇ ಇರುವ ತೀರ್ಮಾನಕ್ಕೆ ಬಂದಿದ್ದಾರೆ ಎಂದು ಹೇಳಿತು.
ಇದೇ ಸಮಯದಲ್ಲಿ ಗಂಭೀರ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ನೇಪಾಳದ ಪ್ರಧಾನಿ ಕೆ. ಪಿ .ಶರ್ಮಾ ಒಲಿ ಆಸ್ಪತ್ರೆಯಿಂದ ಬಿಡುಗಡೆಯಾದ ಒಂದು ದಿನದ ನಂತರ ಆನ್ಲೈನ್ ಚರ್ಚೆಯಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದರು. ತಮ್ಮ ವೀಡಿಯೋ ಕಾನ್ಫರೆನ್ಸ್ ಚರ್ಚೆಯ ಕೊನೆಯಲ್ಲಿ ಕಾಶ್ಮೀರ ವಿವಾದ ಪ್ರಸ್ತಾಪಿಸಲು ಯತ್ನಿಸಿದ ಪಾಕಿಸ್ತಾನದ ಪ್ರತಿನಿಧಿಯ ಮಾತುಗಳನ್ನು ಸೌಜನ್ಯತೆ ಇಲ್ಲದ್ದು ಮತ್ತು ಅನಗತ್ಯವಾದದ್ದು ಎಂದು ಅಧಿಕಾರಿಗಳು ಬಣ್ಣಿಸಿದ್ದಾರೆ. ಮಾನವೀಯ ಉದ್ದೇಶಕ್ಕೆ ಏರ್ಪಡಿಸಿದ್ದ ಸಭೆಯನ್ನು ನಮ್ಮ ಸ್ನೇಹಿತರು ರಾಜಕೀಯಗೊಳಿಸಲು ಪ್ರಯತ್ನಿಸಿದ್ದಾರೆ ಎಂದು ಉನ್ನತ ಮೂಲವೊಂದು ತಿಳಿಸಿದೆ.
ಸಾರ್ಕ್ ಮಾತುಕತೆ ಬಗ್ಗೆ ಮಾತನಾಡಲು ಕಾಲ ಅಪಕ್ವವಾಗಿದೆ. ಇದ್ದಕ್ಕಿದ್ದಂತೆ ಉದ್ಭವಗೊಂಡ ಒಂದು ಪರಿಸ್ಥಿತಿಯನ್ನು ಎದುರಿಸುವುದು ಹೇಗೆ ಎಂಬುದನ್ನು ಚರ್ಚೆ ನಡೆಸಲು ನಾವು ಅಲ್ಲಿ ಸೇರಿದ್ದೇವು. ಈ ರೀತಿಯಲ್ಲಿ ನಮ್ಮ ಸಭೆಗೆ ಯಾರಾದರೂ ಎಚ್ಚರಿಕೆ ನೀಡುವ ಮುನ್ನ ಗಂಭೀರವಾಗಿ ಇರಬೇಕು. ಇದು ಒಂದಲ್ಲಾ ಒಂದು ವಿಧದಲ್ಲಿ ಬೇರೆ ರೀತಿಯ ಪ್ರಾದೇಶಿಕ ನಿರ್ಣಯಗಳಿಗೆ ಕಾರಣವಾಗಲಿದೆ. ಪಾಕಿಸ್ತಾನದ ಮಾತು ಪ್ರಕತಿಕ್ರಿಯೆಗೆ ಅರ್ಹವಲ್ಲ. ಆ ಮಾತುಗಳು ಆ ದೇಶ ಏನೆಂಬುದನ್ನು ತೋರಿಸಿಕೊಟ್ಟಿವೆ ಎಂದಿವೆ ಮೂಲಗಳು.
ಕೋವಿಡ್ 19 ದಾಳಿ ಹಿನ್ನೆಲೆಯಲ್ಲಿ ಭಾರತದಲ್ಲಿ ಇಲ್ಲಿಯವರೆಗೆ 1444 ಪ್ರಜೆಗಳನ್ನು ಜಗತ್ತಿನ ಬೇರೆ ಬೇರೆ ಸ್ಥಳಗಳಿಂದ ಮರಳಿ ಕರೆತರಲಾಗಿದೆ. ಚೀನಾದಿಂದ 766, ಜಪಾನ್‌ನಿಂದ 124, ಇರಾನ್‌ನಿಂದ 336 ಹಾಗೂ ಇಟಲಿಯಿಂದ 218 ಮಂದಿ ವಾಪಸ್ಸಾಗಿದ್ದಾರೆ. ಸೋಂಕು ಹರಡಬಾರದು ಎಂಬ ಕಾರಣಕ್ಕೆ ರೋಗ ಪೀಡಿತರನ್ನು ಸ್ಥಳಾಂತರ ಮಾಡದೇ ಅವರು ಇದ್ದಲ್ಲಿಯೆ ಇರುವಂತೆ ನೋಡಿಕೊಳ್ಳಲಾಗಿದೆ. ಸ್ಥಳೀಯ ಜನರಿಗೆ ಸಂಪನ್ಮೂಲಗಳನ್ನು ಈಗಾಗಲೇ ವಿಸ್ತರಿಸಿರುವ ಮತ್ತು ವೈದ್ಯಕೀಯ ಸೌಲಭ್ಯಗಳ ಗಂಭೀರ ಕೊರತೆ ಇರುವ ಇಟಲಿ ಹಾಗೂ ಇರಾನ್‌ನಿಂದ ಪರೀಕ್ಷೆ ನಂತರ ರೋಗ ಇಲ್ಲವೆಂದು ದೃಢಪಟ್ಟವರನ್ನು ಸ್ಥಳಾಂತರ ಮಾಡುವ ಕುರಿತು ಚಿಂತನೆ ನಡೆದಿದೆ. ಹೆಚ್ಚುವರಿ ಕಾರ್ಯದರ್ಶಿ ಮತ್ತು ಕೋವಿಡ್- 19 ಸಂಯೋಜನೆ ನೋಡಿಕೊಳ್ಳುತ್ತಿರುವ ದಮ್ಮು ರವಿ ಅವರ ನೇತೃತ್ವದಲ್ಲಿ ವಿದೇಶಾಂಗ ವ್ಯವಹಾರ ಸಚಿವಾಲಯದ ವಿಶೇಷ ಘಟಕ ಈಗಾಗಲೇ ಶಾಲಾ ಕಾಲೇಜುಗಳು ಮುಚ್ಚಿ ಮತ್ತು ಸ್ಥಗಿತಗೊಂಡ ಹಾಸ್ಟೆಲ್ಗಳಲ್ಲಿ ಉಳಿಯಲು ಅಸಾಧ್ಯವಾದ ಭಾರತೀಯ ಯುವ ವಿದ್ಯಾರ್ಥಿಗಳನ್ನು ಕರೆತರಲು ಮಾನವೀಯ ನೆಲೆಯಲ್ಲಿ ಹಗಲು ರಾತ್ರಿ ಶ್ರಮಿಸುತ್ತಿದೆ.
ಸಾರ್ಕ್ ಸಂದರ್ಭದಲ್ಲಿ ಭಾರತ 1 ಕೋಟಿ ಅಮೆರಿಕನ್ ಡಾಲರ್ ಹಣವನ್ನು ಆರಂಭಿಕ ನಿಧಿಯಾಗಿ ನೀಡುವ ಮತ್ತು ವೈದ್ಯಕೀಯ ನೆರವು ಅಗತ್ಯವಿರುವ ನೆರೆಹೊರೆಯ ರಾಷ್ಟ್ರಗಳಿಗೆ ಕ್ಷಿಪ್ರ ಸ್ಪಂದನಾ ತಂಡವನ್ನು ಕಳುಹಿಸಿಕೊಡುವ ನಿರ್ಧಾರದ ಮೂಲಕ ‘ಸಾರ್ಕ್ ಸಾಂಕ್ರಾಮಿಕ ನಿಧಿ’ ಸ್ಥಾಪಿಸುವುದಾಗಿ ಘೋಷಿಸಿದೆ. ಭಾನುವಾರದ ವೀಡಿಯೊ ಕಾನ್ಫರೆನ್ಸಿಂಗ್ ಬಳಿಕ ವಿದೇಶಾಂಗ ಕಾರ್ಯದರ್ಶಿಗಳು ಮತ್ತು ನಿಯೋಗಗಳನ್ನು ಬಳಸಿಕೊಂಡು ಸಾರ್ಕ್ ಮತ್ತಷ್ಟು ಸಂಘಟಿತ ಕ್ರಮ ಕೈಗೊಳ್ಳಲಿದೆ. ಮಾಲ್ಡೀವ್ಸ್ ವಿನಂತಿಯ 48 ಗಂಟೆಗಳ ಒಳಗೆ ಭಾರತವು ವೈದ್ಯಕೀಯ ಕ್ಷಿಪ್ರ ಸ್ಪಂದನಾ ತಂಡವನ್ನು ಕಳಿಸಿಕೊಟ್ಟಿದೆ. ಇರಾನ್ ಮಾಡಿದ ಕೆಲ ಮಾನವೀಯ ಮನವಿಗಳನ್ನು ಕೂಡ ಭಾರತ ಪರಿಗಣಿಸಿದೆ ಎಂದು ಮೂಲಗಳು ಹೇಳಿವೆ. ಸಾಂಕ್ರಮಿಕ ನಿಧಿ ಸ್ಥಾಪಿಸುವುದರ ಬಗ್ಗೆ ನಾವು ಉದ್ದೇಶಪೂರ್ವಕ ಪ್ರಸ್ತಾವನೆ ಸಲ್ಲಿಸಲಿಲ್ಲ. ಇದನ್ನು ಸಾಧ್ಯವಾದಷ್ಟು ಪರಿಣಾಮಕಾರಿಯಾಗಿ ಮತ್ತು ಕ್ಷಿಪ್ರವಾಗಿ ಅನುಷ್ಠಾನಕ್ಕೆ ತರುವುದು ನಮ್ಮ ಉದ್ದೇಶ ಎಂದು ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಜಿ 20 ಕಾರ್ಯತಂತ್ರ ಏರ್ಪಡುವವರೆಗೆ ಭಾರತ ಇದೇ ರೀತಿಯ ಆನ್‌ಲೈನ್ ಕಾರ್ಯವಿಧಾನದ ಮೂಲಕ ಸಾರ್ಕ್ ನಂಟನ್ನು ಬಳಸಿಕೊಂಡು ಜಾಗತಿಕ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲಿದೆ ಎಂದು ಮೂಲಗಳು ತಿಳಿಸಿವೆ.
ಸ್ಮಿತಾ ಶರ್ಮಾ
ನವದೆಹಲಿ