ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ಅವರ ಸೋದರ ಸೊಸೆ ದೀಪಾ ಮತ್ತು ಸೋದರಳಿಯ ದೀಪಕ್ನನ್ನು ಮದ್ರಾಸ್ ಹೈಕೋರ್ಟ್ ಅವರ ಉತ್ತರಾಧಿಕಾರಿಗಳಾಗಿ ಗುರುತಿಸಿದೆ. ಜಯಲಲಿತಾ ಅವರ ಎಸ್ಟೇಟ್ ಮತ್ತು 900 ಕೋಟಿ ರೂಪಾಯಿಗಿಂತ ಹೆಚ್ಚಿನ ಆಸ್ತಿಗೆ ಇವರೇ ಹಕ್ಕುದಾರರು ಎಂದು ಕೋರ್ಟ್ ಹೇಳಿದೆ.
ನ್ಯಾಯಮೂರ್ತಿ ಎನ್. ಕುರುಬಕರನ್ ಮತ್ತು ನ್ಯಾಯಮೂರ್ತಿ ಅಬ್ದುಲ್ ಖುದೂಸ್ ಅವರ ಪೀಠ ಜಯಲಲಿತಾ ಅವರ ಆಸ್ತಿಗಳ ಕುರಿತ ಮೇಲ್ವಿಚಾರಣೆಗೆ ದೀಪಾ ಮತ್ತು ದೀಪಕ್ ಅವರಿಗೆ ಕಾನೂನು ಅವಕಾಶ ನೀಡಿದೆ.
ಜಯಲಲಿತಾ ಅವರ ನಿವಾಸ ಮತ್ತು ಇತರೆ ಆಸ್ತಿಗಳನ್ನು ತಾತ್ಕಾಲಿಕವಾಗಿ ವಶಪಡಿಸಿಕೊಳ್ಳಲು ತಮಿಳುನಾಡು ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಸುಗ್ರೀವಾಜ್ಞೆ ಹೊರಡಿಸಿದ್ದಾರೆ. ಜಯಲಲಿತಾ ಅವರ ಉತ್ತರಾಧಿಕಾರಿಯಾಗಿ ಗುರುತಿಸಬೇಕೆಂದು ಕೋರಿ ದೀಪಕ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆಯ ನಂತರ ನ್ಯಾಯಾಲಯ ಅವರನ್ನು ಉತ್ತರಾಧಿಕಾರಿಗಳು ಎಂದು ಗುರುತಿಸಿತು. ಈ ನಡುವೆ ಪುಗಾಜೆಂತಿ, ಜಾನಕಿರಾಮನ್ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ.
ಚೆನ್ನೈನ ಪೋಯಸ್ ಗಾರ್ಡನ್ನಲ್ಲಿರುವ ಜಯಲಲಿತಾ ಅವರ ನಿವಾಸವನ್ನು ಸ್ಮಾರಕವನ್ನಾಗಿ ಪರಿವರ್ತಿಸಲು ತಮಿಳುನಾಡು ಸರ್ಕಾರ ಉದ್ದೇಶಿಸಿದೆ. ಆದರೆ, ಮುಖ್ಯಮಂತ್ರಿಯ ಅಧಿಕೃತ ನಿವಾಸ ಮತ್ತು ಕಚೇರಿಯನ್ನಾಗಿ ಬಳಸಬೇಕೆಂದು ಹೈಕೋರ್ಟ್ ಸೂಚಿಸಿದೆ. ನಿವಾಸದ ಒಂದು ಭಾಗವನ್ನು ಸ್ಮಾರಕವನ್ನಾಗಿ ಪರಿವರ್ತಿಸಬಹುದು ಎಂದಿದೆ.
ಕಲ್ಯಾಣ ಕಾರ್ಯಕ್ರಮಗಳಿಗಾಗಿ ದೀಪಕ್ ಮತ್ತು ದೀಪಾ ಅವರು ಜಯಲಲಿತಾ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸಬಹುದೆಂದು ಹೈಕೋರ್ಟ್ ಹೇಳಿದೆ. ಅವರಿಗೆ ಎಲ್ಲಾ ಸಮಯದಲ್ಲೂ ಅವರ ಸ್ವಂತ ಖರ್ಚಿನಲ್ಲೇ ಭದ್ರತೆ ಒದಗಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.