ಬ್ರುಸೆಲ್ಸ್ (ಬ್ರೆಜಿಲ್): ಟೋಕಿಯೋ ಒಲಿಂಪಿಕ್ 2021ಕ್ಕೆ ನಡೆಯಬಹುದು ಅಥವಾ ರದ್ದಾಗಬಹುದು ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಸಹಕಾರ ಆಯೋಗದ ಅಧ್ಯಕ್ಷ ಪಿಯರೆ ಒಲಿವಿಯರ್ ಬೆಕ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಬೆಲ್ಜಿಯಂನ ಸುದ್ದಿ ಮಾಧ್ಯಮವೊಂದಕ್ಕೆ ಮಾತನಾಡಿರುವ ಅವರು, ಮುಂದಿನ ವರ್ಷ ಜುಲೈ 23ಕ್ಕೆ ಒಲಿಂಪಿಕ್ ನಡೆಯಬಹುದು ಅಥವಾ ಮುಂದೂಡಿಕೆಯಾಗಬಹುದು. ರದ್ದಾಗುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ ಎಂದು ಅವರು ಹೇಳಿದ್ದಾರೆ.
ಒಲಿಂಪಿಕ್ಗಾಗಿ ದೊಡ್ಡ ಮೊತ್ತದ ಹಣ ಖರ್ಚು ಮಾಡಲಾಗಿದೆ. ಸಾವಿರಾರು ಮಂದಿ ಜಾಗತಿಕ ಮಟ್ಟದ ಈ ಕ್ರೀಡಾಕೂಟಕ್ಕಾಗಿ ಶ್ರಮಿಸಿದ್ದಾರೆ. ಒಲಿಂಪಿಕ್ ಅನ್ನು ಮುಂದೂಡುವುದು ಹಾಗೂ ರದ್ದುಗೊಳಿಸುವುದು ಯೋಚನೆ ಮಾಡಲೂ ಅಸಾಧ್ಯ ಎಂದರು.
ಅಂತಾರಾಷ್ಟ್ರೀಯ ಒಲಿಂಪಿಕ್ ಕಮಿಟಿಯ ಅಧ್ಯಕ್ಷ ಥಾಮಸ್ ಬಾಕ್, ಮುಂದಿನ ವರ್ಷ ಜುಲೈ 23ರಿಂದ ಆಗಸ್ಟ್ 8ರ ಮಧ್ಯೆ ಒಲಿಂಪಿಕ್ ಕ್ರೀಡಾಕೂಟ ನಡೆಯುತ್ತದೆ ಎಂದು ಭಾವಿಸಿದ್ದೇವೆ. ಒಂದು ವೇಳೆ ನಡೆಯದೇ ಹೋದರೆ ಮುಂದಿನ ನಿರ್ಧಾರದ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.