ಹೈದರಾಬಾದ್: ಪ್ರತಿ ವರ್ಷ ಸೆಪ್ಟೆಂಬರ್ 16ರಂದು ವಿಶ್ವ ಓಜೋನ್ ದಿನ ಎಂದು ಆಚರಿಸಲಾಗುತ್ತದೆ, ಓಜೋನ್ ಪದರದ ಸವಕಳಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಅದನ್ನು ಸಂರಕ್ಷಿಸಲು ಸಂಭವನೀಯ ಪರಿಹಾರಗಳನ್ನು ಹುಡುಕಲಾಗುತ್ತದೆ. ಓಜೋನ್ ಪದರವು ಭೂಮಿಯನ್ನು ಸೂರ್ಯನ ಹಾನಿಕಾರಕ ಕಿರಣಗಳಿಂದ ರಕ್ಷಿಸುತ್ತದೆ. ಈ ಮೂಲಕ ಭೂಮಿ ಮೇಲಿನ ಜೀವಿಗಳು ಜೀವವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
1987 ಸೆಪ್ಟೆಂಬರ್ 16ರಂದು ಕೆನಡಾದ ಮಾಂಟ್ರಿಯಲ್ ನಗರದಲ್ಲಿ ಓಜೋನ್ ಪದರ ಉಳಿಸುವುದಕ್ಕೆ ಸಂಬಂಧಿಸಿದಂತೆ ಕೆಲವು ದೇಶಗಳ ನಡುವೆ ಒಪ್ಪಂದ ನಡೆದಿತ್ತು. ಈ ಐತಿಹಾಸಿಕ ಒಪ್ಪಂದದ ನೆನಪಿಗಾಗಿ ವಿಶ್ವಸಂಸ್ಥೆಯು 1994ರಿಂದ ಈ ದಿನವನ್ನು ಪ್ರತಿ ವರ್ಷ ಆಚರಿಸಲು ನಿರ್ಧರಿಸಿತು. ಓಜೋನ್ ಪದರ ಕ್ಷೀಣಿಸುತ್ತಿದೆ ಮತ್ತು ಇದನ್ನು ಉಳಿಸಿಕೊಳ್ಳಲು ಮಾಡಬೇಕಾದ ಪ್ರಯತ್ನಗಳ ಕುರಿತಂತೆ ಜನರಿಗೆ ಅರಿವು ಮೂಡಿಸುವ ಉದ್ದೇಶವನ್ನು ಈ ದಿನ ಹೊಂದಿದೆ.
ಓಜೋನ್ ಪದರದ ಪ್ರಾಮುಖ್ಯತೆ: ಓಜೋನ್ ಮುಖ್ಯವಾಗಿ ಮೇಲ್ಭಾಗದ ವಾತಾವರಣದಲ್ಲಿ ಕಂಡುಬರುತ್ತದೆ, ಇದನ್ನು ಸ್ಟ್ರಾಟೊಸ್ಫಿಯರ್ ಎಂದು ಕರೆಯಲಾಗುತ್ತದೆ. ಇದು ಭೂಮಿಯ ಮೇಲ್ಮೈಯಿಂದ 10ರಿಂದ 50 ಕಿ.ಮೀ. ಅಂತರದಲ್ಲಿದೆ. ಇದನ್ನು ಪದರವೆಂದು ಹೇಳಲಾಗಿದ್ದರೂ, ಓಜೋನ್ ವಾತಾವರಣದಲ್ಲಿ ಕಡಿಮೆ ಸಾಂದ್ರತೆ ಇರುತ್ತದೆ. ಸೂರ್ಯನಿಂದ ಹಾನಿಕಾರಕ ನೇರಳಾತೀತ ವಿಕಿರಣಗಳನ್ನು ಹೀರಿಕೊಳ್ಳುವ ಮೂಲಕ, ಓಜೋನ್ ಕಣಗಳು ಭೂಮಿಯ ಮೇಲಿನ ಜೀವಿಗಳನ್ನು ಕಕ್ಷಿಸುತ್ತವೆ. ಯುವಿ ಕಿರಣಗಳು ಚರ್ಮದ ಕ್ಯಾನ್ಸರ್ ಮತ್ತು ಇತರ ರೋಗಗಳು ಮತ್ತು ಸಸ್ಯಗಳು ಮತ್ತು ಪ್ರಾಣಿಗಳಲ್ಲಿನ ವಿರೂಪಗಳಿಗೆ ಕಾರಣವಾಗುತ್ತವೆ.
ಓಜೋನ್ ಸವಕಳಿಗೆ ಕಾರಣಗಳು: ಓಜೋನ್ ಪದರದ ಕ್ಷೀಣಿಸಲು ಮುಖ್ಯ ಕಾರಣ ಮಾನವ ಚಟುವಟಿಕೆ. ಮುಖ್ಯವಾಗಿ ಮಾನವ ನಿರ್ಮಿತ ರಾಸಾಯನಿಕಗಳಾದ ಕ್ಲೋರಿನ್ ಅಥವಾ ಬ್ರೋಮಿನ್ ಆಗಿವೆ. ಈ ರಾಸಾಯನಿಕಗಳನ್ನು ಒಡಿಎಸ್ ಎಂದು ಕರೆಯಲಾಗುತ್ತದೆ. 1970ರ ದಶಕದ ಆರಂಭದಿಂದಲೂ ವಿಜ್ಞಾನಿಗಳು ವಾಯು ಮಂಡಲದಲ್ಲಿ ಓಜೋನ್ ಕಡಿಮೆಯಾಗುವುದನ್ನು ಗಮನಿಸಿದರು ಮತ್ತು ಇದು ಪೋಲಾರ್ ಪ್ರದೇಶಗಳಲ್ಲಿ ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯಿತು. ಮುಖ್ಯವಾಗಿ ಓಜೋನ್ ಕ್ಷೀಣಿಸುವ ಪದಾರ್ಥಗಳಲ್ಲಿ ಕ್ಲೋರೊಫ್ಲೋರೊ ಕಾರ್ಬನ್‌ಗಳು (ಸಿಎಫ್‌ಸಿ), ಕಾರ್ಬನ್ ಟೆಟ್ರಾಕ್ಲೋರೈಡ್, ಹೈಡ್ರೋಕ್ಲೋರೊಫ್ಲೋರೊ ಕಾರ್ಬನ್‌ಗಳು (ಹೆಚ್‌ಸಿಎಫ್‌ಸಿ) ಮತ್ತು ಮೀಥೈಲ್ ಕ್ಲೋರೊಫಾರ್ಮ್ ಸೇರಿವೆ. ಹ್ಯಾಲೋನ್ಸ್ ಅನ್ನು ಕೆಲವೊಮ್ಮೆ ಬ್ರೋಮಿನೇಟೆಡ್ ಫ್ಲೋರೋಕಾರ್ಬನ್ ಎಂದು ಕರೆಯಲಾಗುತ್ತದೆ. ಇದು ಓಜೋನ್ ಸವಕಳಿಗೆ ಕಾರಣವಾಗುತ್ತದೆ.
ಈ ವರ್ಷದ ಆರ್ಕ್ಟಿಕ್ ಓಜೋನ್ ರಂಧ್ರ ಏಕೆ ದೊಡ್ಡದಾಗಿದೆ?
ಈ ವರ್ಷ, ಆರ್ಕ್ಟಿಕ್ ಮೇಲೆ ಓಜೋನ್ ಸವಕಳಿ ಹೆಚ್ಚು ದೊಡ್ಡದಾಗಿತ್ತು. ವಾಯು ಮಂಡಲದಲ್ಲಿ ಘನೀಕರಿಸುವ ತಾಪಮಾನ ಸೇರಿದಂತೆ ಅಸಾಮಾನ್ಯ ವಾತಾವರಣ ಪರಿಸ್ಥಿತಿಗಳು ಕಾರಣವೆಂದು ವಿಜ್ಞಾನಿಗಳು ನಂಬಿದ್ದಾರೆ. ಯುರೋಪಿಯನ್ ಬಾಹ್ಯಾಕಾಶ ಏಜೆನ್ಸಿಯ ವರದಿಯ ಪ್ರಕಾರ, ಆರ್ಕ್ಟಿಕ್ ಓಜೋನ್ ಪದರದ ಅವನತಿಗೆ ಶೀತ ತಾಪಮಾನ (-80 ಡಿಗ್ರಿ ಸೆಲ್ಸಿಯಸ್ ಗಿಂತ ಕಡಿಮೆ), ಸೂರ್ಯನ ಬೆಳಕು, ಗಾಳಿ ಕ್ಷೇತ್ರಗಳು ಮತ್ತು ಕ್ಲೋರೊಫ್ಲೋರೊಕಾರ್ಬನ್ (ಸಿಎಫ್‌ಸಿ) ನಂತಹ ವಸ್ತುಗಳು ಕಾರಣವಾಗಿವೆ.
ಓಜೋನ್ ಚೇತರಿಕೆ: 2018ರ ಓಜೋನ್ ಸವಕಳಿ ದತ್ತಾಂಶದ ವೈಜ್ಞಾನಿಕ ಮೌಲ್ಯಮಾಪನದ ಪ್ರಕಾರ, ವಾಯು ಮಂಡಲದ ಕೆಲವು ಭಾಗಗಳಲ್ಲಿನ ಓಜೋನ್ ಪದರವು 2000ರಿಂದ ಪ್ರತಿ ದಶಕಕ್ಕೆ 1-3 ಶೇಕಡಾ ದರದಲ್ಲಿ ಚೇತರಿಸಿಕೊಂಡಿದೆ. “ಈ ಯೋಜಿತ ದರಗಳಲ್ಲಿ, ಉತ್ತರ ಗೋಳಾರ್ಧ ಮತ್ತು ಮಧ್ಯ -ಲಾಟಿಟ್ಯೂಡ್ ಓಜೋನ್ ಸುಮಾರು 2030ರ ವೇಳೆಗೆ ಚೇತರಿಸಿಕೊಳ್ಳಲಿದೆ ಎಂದು ಊಹಿಸಲಾಗಿದೆ, ನಂತರ ದಕ್ಷಿಣ ಗೋಳಾರ್ಧವು 2050 ರ ಸುಮಾರಿಗೆ ಮತ್ತು 2060 ರ ವೇಳೆಗೆ ಧ್ರುವ ಪ್ರದೇಶಗಳಲ್ಲಿ ಚೆತರಿಸಿಕೊಳ್ಳಲಿದೆ ಎಂದು ವರದಿ ತಿಳಿಸಿದೆ.
ಓಜೋನ್ ಪದರವನ್ನು ಮತ್ತಷ್ಟು ಕ್ಷೀಣಿಸದಂತೆ ತಡೆಯಲು ನೀವು ಒಂದು ಹೆಜ್ಜೆ ಇಡಲು ಬಯಸಿದರೆ, ಈ 5 ವಿಷಯಗಳನ್ನು ನೆನಪಿನಲ್ಲಿಡಿ.
ಸಾರ್ವಜನಿಕ ಸಾರಿಗೆಯನ್ನು ಬಳಸಿ: ವಾಹನಗಳಿಂದ ಹೊರಸೂಸುವ ಹೊಗೆ ಓಜೋನ್ ಪದರಕ್ಕೆ ಹಾನಿಯನ್ನುಂಟು ಮಾಡುತ್ತದೆ. ಇದನ್ನು ತಪ್ಪಿಸಲು, ಅಗತ್ಯವಿಲ್ಲದಿದ್ದಾಗ ಖಾಸಗಿ ವಾಹನಗಳನ್ನು ಬಳಸುವುದನ್ನು ನಿಲ್ಲಿಸಿ. ಸೈಕಲ್‌ಗಳನ್ನು ಬಳಸುವುದು ಅತ್ಯಂತ ಅನುಕೂಲಕರ ಮಾರ್ಗಗಳಲ್ಲಿ ಒಂದಾಗಿದೆ. ನೀವು ಕಾರನ್ನು ಬಳಸಬೇಕಾದ ಸಂದರ್ಭದಲ್ಲಿ ಸಾರ್ವಜನಿಕ ಸಾರಿಗೆಯನ್ನು ಬಳಸಿ.
ಮರುಬಳಕೆ: ಮರುಬಳಕೆ ಮಾಡುವುದು ಜೀವನ ವಿಧಾನಗಳಲ್ಲಿ ಒಂದಾಗಿರಬೇಕು. ಒಣ ಮತ್ತು ಸಾವಯವ ಕಸವನ್ನು ಬೇರ್ಪಡಿಸಿ ನಂತರ ಅದನ್ನು ಮರುಬಳಕೆ ಮಾಡಿ. ಪಾಲಿಥಿನ್ ಅಥವಾ ಪ್ಲಾಸ್ಟಿಕ್ ಸಂಪೂರ್ಣವಾಗಿ ಬಳಸುವುದನ್ನು ತಪ್ಪಿಸಿ. ಬದಲಿಗೆ ಮರುಬಳಕೆ ಮಾಡಬಹುದಾದ ವಸ್ತುಗಳನ್ನು ಬಳಸಿ.
ಪರಿಸರ ಸ್ನೇಹಿ ಉತ್ಪನ್ನಗಳನ್ನು ಖರೀದಿಸಿ: ವಿವಿಧ ಉತ್ಪನ್ನಗಳಿಂದ ಬಿಡುಗಡೆಯಾದ ವಿಷಕಾರಿ ರಾಸಾಯನಿಕಗಳು ಓಜೋನ್ ಪದರಕ್ಕೆ ಹಾನಿ ಮಾಡುವಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತವೆ. ಸೆಣಬಿನ ಚೀಲಗಳು, ಮರುಬಳಕೆ ಮಾಡಬಹುದಾದ ಪಾತ್ರೆಗಳು ಸೇರಿದಂತೆ ಪರಿಸರ ಸ್ನೇಹಿ ಉತ್ಪನ್ನಗಳನ್ನು ಖರೀದಿಸುವ ಮೂಲಕ ಅಪಾಯವನ್ನು ತಡೆಯಲು ಪ್ರಯತ್ನಿಸಿ.
ಕೀಟನಾಶಕಗಳನ್ನು ತಪ್ಪಿಸಿ: ಪ್ರಾಣಿಗಳಿಗೆ ಮಾತ್ರವಲ್ಲ, ಮನುಷ್ಯರಿಗೂ ಸಹ ಹಾನಿಕಾರಕ ಅಂಶವೆಂದರೆ ಕೀಟನಾಶಕಗಳು. ಗರಿಷ್ಠ ಇಳುವರಿಯನ್ನು ಪಡೆಯಲು, ರೈತರು ಕೀಟನಾಶಕಗಳ ರಕ್ಷಣೆಯಲ್ಲಿ ತರಕಾರಿಗಳನ್ನು ಬೆಳೆಯುತ್ತಾರೆ. ಸ್ವತಃ ತರಕಾರಿಗಳನ್ನು ಬೆಳೆಸುವ ಮೂಲಕ ಅದನ್ನು ನಿಗ್ರಹಿಸಲು ಪ್ರಯತ್ನಿಸಿ. ಅಲ್ಲದೆ, ಸಸ್ಯಗಳನ್ನು ರಕ್ಷಿಸಲು ನೈಸರ್ಗಿಕ ಪರಿಹಾರಗಳನ್ನು ಬಳಸಲು ಇತರರಿಗೆ ಸೂಚಿಸಿ.
ಸಿಎಫ್‌ಸಿಗಳನ್ನು ಹೊರಸೂಸುವ ಉತ್ಪನ್ನಗಳನ್ನು ತಪ್ಪಿಸಿ: ಇದು ನಂಬಲಾಗದಂತೆಯೇ ತೋರುತ್ತದೆಯಾದರೂ, ರೆಫ್ರಿಜರೇಟರ್‌ಗಳು ಮತ್ತು ಎಸಿಗಳಂತಹ ದೈನಂದಿನ ಬಳಕೆಯ ವಸ್ತುಗಳು ಸಿಎಫ್‌ಸಿಗಳನ್ನು ಹೊರಸೂಸುತ್ತವೆ. ಇದನ್ನು ಅನೇಕ ಅಪ್ಲಿಕೇಶನ್‌ಗಳಲ್ಲಿ ನಿಷೇಧಿಸಲಾಗಿದೆ ಅಥವಾ ಕಡಿಮೆ ಮಾಡಲಾಗಿದೆ, ಆದರೆ ಈ ಉತ್ಪನ್ನಗಳ ಬಳಕೆಯನ್ನು ಗಮನದಲ್ಲಿರಿಸಿಕೊಳ್ಳುವುದು ಯಾವಾಗಲೂ ಸುರಕ್ಷಿತವಾಗಿದೆ.