ನವದೆಹಲಿ: ಜೂನ್ 15 ರಂದು ಲಡಾಖ್ನ ಗಾಲ್ವನ್ ವ್ಯಾಲಿಯಲ್ಲಿ ನಡೆದ ಚೀನಾ - ಭಾರತ ಸಂಘರ್ಷದ ಸಮಯದಲ್ಲಿ ಭಾರತೀಯ ಸೈನಿಕರಿಗಿಂತಲೂ 5 ಪಟ್ಟು ಹೆಚ್ಚಿನ ಸಂಖ್ಯೆಯ ಚೀನಿ ಸೈನಿಕರಿದ್ದರು ಎಂದು ತಿಳಿದುಬಂದಿದೆ. ಆದರೂ ಒಂಚೂರು ಅಳುಕದೆ ಚೀನಿ ಸೈನಿಕರಿಗೆ ದಿಟ್ಟ ಪ್ರತಿರೋಧ ಒಡ್ಡಿದ ಭಾರತೀಯ ಯೋಧರು ದೇಶಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧ ಎಂದು ನಿರೂಪಿಸಿದ್ದಾರೆ.
ವಾಸ್ತವ ನಿಯಂತ್ರಣ ರೇಖೆಯ ಬಳಿ ನಡೆದ ಸಂಘರ್ಷದ ವೇಳೆ ಚೀನಿ ಸೈನಿಕರ ಸಂಖ್ಯೆ ಹೆಚ್ಚಿತ್ತು ಎಂಬುದನ್ನು ಮಿಲಿಟರಿ ಅಧಿಕಾರಿಯೊಬ್ಬರು ಈಗ ಖಚಿತಪಡಿಸಿದ್ದಾರೆ. ಭಾರತೀಯ ಯೋಧರ ಮೇಲೆ ಮುಗಿಬೀಳುವ ಮುನ್ನ ಚೀನಾ ಸೇನಾಪಡೆ ಥರ್ಮಲ್ ಸ್ಕ್ಯಾನಿಂಗ್ ಡ್ರೋನ್ಗಳನ್ನು ಬಳಸಿ ಎಲ್ಲೆಲ್ಲಿ ಹಾಗೂ ಎಷ್ಟು ಸಂಖ್ಯೆಯಲ್ಲಿ ಭಾರತೀಯ ಯೋಧರಿದ್ದಾರೆ ಎಂಬುದನ್ನು ಮೊದಲೇ ಲೆಕ್ಕ ಹಾಕಿತ್ತು ಎನ್ನಲಾಗಿದೆ.
ಇತ್ತೀಚಿನ ಹಲವಾರು ದಶಕಗಳಲ್ಲಿ ಚೀನಾ ಮಿಲಿಟರಿ ಭಾರತೀಯ ಯೋಧರ ಮೇಲೆ ನಡೆಸಿದ ಅತಿ ಕ್ರೂರ ಆಕ್ರಮಣ ಇದಾಗಿದೆ ಎಂದು ಕೇಂದ್ರ ಸರಕಾರ ಹೇಳಿದೆ.
ಶಾಂತಿ ಮರುಸ್ಥಾಪನೆಯ ಒಪ್ಪಂದದಂತೆ ಚೀನಾ ಸೈನಿಕರು ನಿಯಂತ್ರಣ ರೇಖೆಯಿಂದ ಹಿಂದೆ ಸರಿದಿರುವುದನ್ನು ಖಚಿತ ಪಡಿಸಿಕೊಳ್ಳಲು ಕರ್ನಲ್ ಸಂತೋಷ ಬಾಬು ಹೋಗಿದ್ದರು. ಆದರೆ ಚೀನಾ ಸೇನೆ ಹಿಂದೆ ಸರಿಯುವುದು ಒತ್ತಟ್ಟಿಗಿರಲಿ, ಸೈನಿಕರು ಅಲ್ಲೇ ಬೀಡು ಬಿಟ್ಟು ಉಗ್ರ ಆಕ್ರಮಣಕ್ಕೆ ಸಜ್ಜಾಗಿ ಕುಳಿತಿರುವುದು ಕಂಡುಬಂದಿತ್ತು. ಭಾರತೀಯ ಯೋಧರು ಇದನ್ನು ಗ್ರಹಿಸುವಷ್ಟರಲ್ಲಿಯೇ ಚೀನಿಯರು ನಮ್ಮ ಯೋಧರ ಮೇಲೆ ಮುಗಿಬಿದ್ದು ಹಿಂಸಾಚಾರ ನಡೆಸಿದರು ಎನ್ನಲಾಗಿದೆ.
ಘರ್ಷಣೆ ಆರಂಭವಾದ ನಂತರ ಎರಡೂ ಕಡೆಯಿಂದ ಮತ್ತಷ್ಟು ಸೈನಿಕರು ಹೋರಾಟಕ್ಕಿಳಿದಿದ್ದರಿಂದ ತಡರಾತ್ರಿವರೆಗೂ ಸಂಘರ್ಷ ಮುಂದುವರೆದಿತ್ತು. ಕೊನೆಗೂ ಎರಡೂ ಬದಿಯ ಸೈನಿಕರು ನಿತ್ರಾಣರಾದ ನಂತರವೇ ಘರ್ಷಣೆ ನಿಂತಿತು ಎಂದು ಮೂಲಗಳು ಹೇಳಿವೆ.
ಅಂದಿನ ಸಂಘರ್ಷದಲ್ಲಿ ಗಾಯಗೊಂಡ ಇನ್ನೂ ಕೆಲ ಯೋಧರ ಸ್ಥಿತಿ ಗಂಭೀರವಾಗಿದೆ. ಆದರೂ ಎಷ್ಟು ಜನ ಗಾಯಗೊಂಡಿದ್ದಾರೆ ಎಂಬ ಬಗ್ಗೆ ನಿಖರ ಅಂಕಿ ಸಂಖ್ಯೆ ನೀಡಲು ಸೇನಾ ಮೂಲಗಳು ನಿರಾಕರಿಸಿವೆ.