ಮುಂಬೈ: ಯುಎಸ್ ಡಾಲರ್ ಮುಂದೆ ರೂಪಾಯಿ ಮೌಲ್ಯ ಮತ್ತೆ ಕುಸಿಯಲಿದೆ ಅಂತಾ ಫಿಚ್ ಸಲ್ಯೂಷನ್ (ಆರ್ಥಿಕ ಸಮೀಕ್ಷಕ ಸಂಸ್ಥೆ) ತಿಳಿಸಿದೆ. ಈ ಹಿಂದೆ ಪ್ರತಿ ಡಾಲರ್ಗೆ 75.50 ರೂಪಾಯಿ ಇದ್ದ ರೂಪಾಯಿ, ಸದ್ಯ ಒಂದು ಡಾಲರ್ಗೆ 77 ರೂಪಾಯಿಗೆ ಇಳಿದಿದೆ. 2022 ರ ವೇಳೆಗೆ 77 ರಿಂದ 79 ರೂಪಾಯಿಗೆ ಇಳಿಕೆ ಆಗಲಿದೆ ಎಂದು ಅಂದಾಜಿಸಲಾಗಿದೆ.
ಮುಂದಿನ ಕೆಲ ದಿನಗಳಲ್ಲಿ ರೂಪಾಯಿಯ ಮೌಲ್ಯ ಕುಸಿಯಲಿದ್ದು, ದುರ್ಬಲವಾಗಿಯೇ ವಹಿವಾಟು ನಡೆಸಲಿದೆ ಎನ್ನಲಾಗಿದೆ. ಏರುತ್ತಿರುವ ತೈಲ ಬೆಲೆಗಳು, ಮತ್ತಷ್ಟು ಹಣಕಾಸು ಹರಿವು, ರಫ್ತು ಸಂಬಂಧಿತ ಹಣದುಬ್ಬರ ತಡೆಗೆ ರಿಸರ್ವ್ ಬ್ಯಾಂಕ್ ಕೈಗೊಳ್ಳಬಹುದಾದ ಕ್ರಮಗಳ ಹಿನ್ನೆಲೆಯಲ್ಲಿ ರೂಪಾಯಿಯ ಮೇಲೆ ಒತ್ತಡಗಳು ಮುಂದುವರಿಯಬಹುದಾಗಿದೆ. ಭಾರತ ತನ್ನ ಕಚ್ಚಾತೈಲ ಅಗತ್ಯತೆಗಳಿಗಾಗಿ ಬಹುತೇಕ ವಿದೇಶಗಳನ್ನು ಅವಲಂಬಿಸಿದ್ದು, ಶೇಕಡಾ 80 ರಷ್ಟು ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಹೀಗಾಗಿ ಜಾಗತಿಕ ಮಟ್ಟದಲ್ಲಿ ತೈಲ ಬೆಲೆಗಳ ಏರಿಕೆಯಿಂದ 2021 ರಲ್ಲಿ ರೂಪಾಯಿ ಮೌಲ್ಯ ಮತ್ತಷ್ಟು ಪಾತಾಳಕ್ಕಿಳಿಯಬಹುದು.
ಯೂರೋಪ್, ಏಷ್ಯಾ ಹಾಗೂ ಅಮೆರಿಕಗಳಲ್ಲಿ ಕೋವಿಡ್ ಬಿಕ್ಕಟ್ಟು ಸುಧಾರಿಸುತ್ತಿದೆ ಎನ್ನುವ ಆಧಾರಗಳ ಮೇಲೆ ಜಾಗತಿಕ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗುವುದು ಇನ್ನೂ ಅನುಮಾನವೇ ಇದೆ. ಹೀಗಾಗಿ ರೂಪಾಯಿ ಮೌಲ್ಯ ಡಾಲರ್ ಮುಂದೆ ಮಂಕಾಗಬಹುದು.