ರಾಂಚಿ: ಏಕದಿನ, ಟಿ-20 ಕ್ರಿಕೆಟ್ ಸರಣಿ ಶುರುವಾದ ಮೇಲೆ ಟೆಸ್ಟ್ ಕ್ರಿಕೆಟ್ ನೋಡುವ ಕ್ರೀಡಾಭಿಮಾನಿಗಳ ಆಸಕ್ತಿ ಮತ್ತಷ್ಟು ಕಡಿಮೆಯಾಗಿದ್ದು, ಐಸಿಸಿ ಅದಕ್ಕಾಗಿ ಹೊಸ ಹೊಸ ಪ್ಲಾನ್ ರೂಪಿಸುತ್ತಿದ್ದರೂ ಪ್ರಯೋಜನಕ್ಕೆ ಬರುತ್ತಿಲ್ಲ.
ಟೆಸ್ಟ್ ಕ್ರಿಕೆಟ್ನಲ್ಲೂ ಮಹತ್ವದ ಬದಲಾವಣೆ ತರಲು ಮುಂದಾಗಿರುವ ಐಸಿಸಿ, ವಿಶ್ವ ಚಾಂಪಿಯನ್ ಟೆಸ್ಟ್ ಟೂರ್ನಿ ಆಯೋಜನೆ ಮಾಡಿದೆ. ಇಷ್ಟಾದ್ರೂ ಕ್ರೀಡಾಭಿಮಾನಿಗಳಲ್ಲಿ ಅದರ ಬಗ್ಗೆ ಹೆಚ್ಚಿನ ಆಸಕ್ತಿ ಇಲ್ಲದಂತಾಗಿದೆ. ನಾಳೆಯಿಂದ ಜಾರ್ಖಂಡ್ನ ರಾಂಚಿಯಲ್ಲಿ ನಡೆಯಲಿರುವ ಭಾರತ-ದಕ್ಷಿಣ ಆಫ್ರಿಕಾ ನಡುವಿನ ಕೊನೆ ಟೆಸ್ಟ್ ಪಂದ್ಯ ನೋಡಲು ಕ್ರೀಡಾಭಿಮಾನಿಗಳು ಹೆಚ್ಚಿನ ಪ್ರಮಾಣದಲ್ಲಿ ಟಿಕೆಟ್ ಖರೀದಿ ಮಾಡದಿರುವುದೇ ಅದಕ್ಕೆ ಕಾರಣವಾಗಿದೆ.
ಒಟ್ಟು 39,000 ಜನರು ಒಟ್ಟಿಗೆ ಕುಳಿತುಕೊಂಡು ಕ್ರಿಕೆಟ್ ವೀಕ್ಷಣೆ ಮಾಡಬಹುದಾಗಿದೆ. ಆದರೆ ಫೈನಲ್ ಟೆಸ್ಟ್ ಪಂದ್ಯಕ್ಕಾಗಿ ಕೇವಲ 1500 ಮಂದಿ ಮಾತ್ರ ಟಿಕೆಟ್ ಖರೀದಿ ಮಾಡಿದ್ದಾರೆ. 200 - 2000ರೂವರೆಗೆ ಟಿಕೆಟ್ ಲಭ್ಯವಾಗುತ್ತಿದ್ದು, ಪ್ರಸಕ್ತ ವರ್ಷದಲ್ಲಿ ಅತಿ ಕಡಿಮೆ ಬೆಲೆಗೆ ಈ ಪಂದ್ಯಕ್ಕಾಗಿ ಟಿಕೆಟ್ ಲಭ್ಯವಾಗುತ್ತಿದೆ ಎಂದು ಜಾರ್ಖಂಡ್ ಕ್ರಿಕೆಟ್ ಅಸೋಷಿಯೇಷನ್ ಕಾರ್ಯದರ್ಶಿ ಸಂಜಯ್ ಶಾ ತಿಳಿಸಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ ಈಗಾಗಲೇ ಆಡಿರುವ ಎರಡೂ ಪಂದ್ಯಗಳಲ್ಲಿ ಗೆಲುವು ದಾಖಲು ಮಾಡಿ ಸರಣಿಯಲ್ಲಿ 2-0 ಅಂತರದ ಮುನ್ನಡೆ ಪಡೆದುಕೊಂಡಿದೆ. ನಾಳೆಯಿಂದ ಫೈನಲ್ ಪಂದ್ಯ ಆರಂಭಗೊಳ್ಳಲಿದೆ.