ನವದೆಹಲಿ: ಪ್ರಧಾನ ಮಂತ್ರಿ ತಮ್ಮ ಕಾರ್ಯಗಳಿಂದ ರಾಷ್ಟ್ರವನ್ನು ಅಚ್ಚರಿಗೊಳಿಸುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ಜುಲೈ 3ರಂದು ಮೋದಿ ಲೇಹ್‌ಗೆ ಭೇಟಿ ನೀಡಿ, ಗಾಯಗೊಂಡ ಸೈನಿಕರನ್ನು ಭೇಟಿ ಮಾಡಿ, ಬ್ರೀಫಿಂಗ್‌ಗಳಿಗೆ ಹಾಜರಾಗಿ, ಭಾಷಣ ಮಾಡುವ ಮೂಲಕ ದೇಶದ ಜನರನ್ನೇ ಅಚ್ಚರಿಗೊಳಿಸಿದ್ದಾರೆ ಎಂದು ನಿವೃತ್ತ ಲೆಫ್ಟಿನೆಂಟ್ ಜನರಲ್ ಡಿ.ಎಸ್ ಹೂಡಾ ಹೇಳಿದ್ದಾರೆ.
ಪೂರ್ವ ಲಡಾಖ್‌ನಲ್ಲಿ ಭಾರತ ಮತ್ತು ಚೀನಾ ಸೇನೆಗಳ ನಡುವೆ ನಡೆಯುತ್ತಿರುವ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಈ ಭೇಟಿ ಗಮನಾರ್ಹವಾಗಿದೆ ಎಂದು ಹೂಡಾ ತಿಳಿಸಿದ್ದಾರೆ.
ಮಿಲಿಟರಿ ಮಟ್ಟದ ಮಾತುಕತೆಗಳು ಶಾಂತಿಗೆ ಕಾರಣವಾಗಬಹುದು ಎಂದು ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಆದರೆ ಜೂನ್ 15ರಂದು ಗಾಲ್ವಾನ್ ಕಣಿವೆಯಲ್ಲಿ ಘರ್ಷಣೆ ಬಳಿಕ ಆ ಭರವಸೆ ಚೂರುಚೂರಾಗಿತ್ತು ಎಂದು ಅವರು ಹೇಳಿದ್ದಾರೆ.
ಕಳೆದ ಎರಡು ತಿಂಗಳುಗಳಿಂದ, ಚೀನಾದ ವಿದೇಶಾಂಗ ಸಚಿವಾಲಯವು ಸಾಧ್ಯವಾದಷ್ಟು ಬೇಗ ಉದ್ವಿಗ್ನತೆಯನ್ನು ಕಡಿಮೆಗೊಳಿಸಿ ಶಾಂತಿ ಕಾಪಾಡುವ ಕುರಿತು ಮಾತನಾಡುತ್ತಿದೆ. ಆದರೆ, ಗಡಿಯಲ್ಲಿ ತಮ್ಮ ಮಿಲಿಟರಿ ಸ್ಥಾನಗಳನ್ನು ಬಲಪಡಿಸುವಲ್ಲಿ ನಿರತರಾಗಿದ್ದಾರೆ. ಹೀಗಾಗಿ ಈ ನಡವಳಿಕೆ ಭಾರತದ ಕಡೆಯಿಂದ ಸ್ವೀಕಾರಾರ್ಹವಲ್ಲ ಎಂಬುದಕ್ಕೆ ಮೋದಿ ಲಡಾಖ್ ಭೇಟಿ ಒಂದು ಸೂಚನೆಯಾಗಿದೆ ಎಂದು ಡಿ.ಎಸ್ ಹೂಡಾ ಅಭಿಪ್ರಾಯಪಟ್ಟಿದ್ದಾರೆ.