ನವದೆಹಲಿ: ಕೆಲವು ತಿಂಗಳಿಂದ ದೇಶದಲ್ಲಿ ಕೋವಿಡ್ ಸೋಂಕು ಸಮುದಾಯಕ್ಕೆ ಹರಡಿರುವುದನ್ನು ನಿರಾಕರಿಸುತ್ತಿದ್ದ ಕೇಂದ್ರ ಸರ್ಕಾರ ಇಂದು ದೇಶದಲ್ಲಿ ಕೊರೊನಾ ವೈರಸ್ ಸಮುದಾಯಕ್ಕೆ ಹರಡಿದೆ ಎಂದು ಒಪ್ಪಿಕೊಂಡಿದೆ.
ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ತಮ್ಮ ರಾಜ್ಯದಲ್ಲಿ ಕೊರೊನಾ ಸಮುದಾಯಕ್ಕೆ ಹರಡಿದೆ ಎಂದು ಒಪ್ಪಿಕೊಂಡ ಬೆನ್ನಲ್ಲೇ ದೇಶದಲ್ಲೂ ಕೊರೊನಾ ಸಮುದಾಯಕ್ಕೆ ಹರಡಿದೆ ಎಂದು ಕೇಂದ್ರ ಆರೋಗ್ಯ ಸಚಿವರಾದ ಹರ್ಷವರ್ಧನ್ ತಿಳಿಸಿದ್ದಾರೆ.
ಸಂಡೇ ಸಂವಾದ್ ಎಂಬ ವಾರಪತ್ರಿಕೆಗಾಗಿ ಮಾತನಾಡಿದ ಅವರು, ಪಶ್ಚಿಮ ಬಂಗಾಳದಂತಹ ಜನಸಾಂದ್ರತೆ ಹೆಚ್ಚಿರುವ ರಾಜ್ಯಗಳಲ್ಲಿ ಹಾಗೂ ಕೆಲವು ಜಿಲ್ಲೆಗಳಲ್ಲಿ ಕೊರೊನಾ ಸಮುದಾಯಕ್ಕೆ ಹರಡಿದೆ ಎಂದು ಮಾಹಿತಿ ನೀಡಿದ್ದಾರೆ.
'ಪತ್ರಿಕೆಗಳ ಮೂಲಕ ಕೊರೊನಾ ಹರಡಲ್ಲ'
ಕೊರೊನಾ ವೈರಸ್ ತನ್ನ ರೂಪವನ್ನು ಬದಲಿಸಿಕೊಂಡಿದೆ ಎಂದು ಎಲ್ಲೆಡೆಯೂ ಮಾಹಿತಿ ಹರಿದಾಡುತ್ತಿದ್ದು, ದೇಶದಲ್ಲಿ ಅಂತಹ ಯಾವುದೇ ಉದಾಹರಣೆ ಸಿಕ್ಕಿಲ್ಲ ಎಂದು ಹರ್ಷವರ್ಧನ್ ಹೇಳಿದ್ದು, ಪತ್ರಿಕೆಗಳ ಮೂಲಕ ಕೊರೊನಾ ಹರಡುತ್ತದೆ ಎನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ. ಕೊರೊನಾ ವೈರಸ್ ಹರಡುತ್ತಿರುವ ವೇಳೆಯಲ್ಲಿ ಪತ್ರಿಕೆಗಳನ್ನು ಓದುವುದು ಅತ್ಯಂತ ಸುರಕ್ಷಿತ ಎಂದು ಅಭಿಪ್ರಾಯಪಟ್ಟರು.
ಕೊರೊನಾಗೆ ಪರಿಹಾರ ಪ್ಯಾಕೇಜ್ ಬಗ್ಗೆ ಮಾತನಾಡಿ, ಕೋವಿಡ್ನ ಎರಡನೇ ಹಂತದ ಪ್ಯಾಕೇಜ್ನ ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು, ಆ ಹಣವನ್ನು ಆಗಸ್ಟ್, ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ಹಂಚಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಕೇರಳದಲ್ಲಿ ನಡೆದ ಓಣಂ ಹಬ್ಬದಲ್ಲಿ ಜನರು ನಿರ್ಲಕ್ಷ್ಯ ವಹಿಸಿದ್ದೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಲು ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಅವರು, ಇದಕ್ಕೆ ಅವರು ಬೆಲೆ ತೆರಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.