ನವದೆಹಲಿ: ಪಾಕ್ನಲ್ಲಿ ಗಲ್ಲು ಶಿಕ್ಷೆಗೆ ಒಳಗಾಗಿರುವ ಕುಲಭೂಷಣ್ ಜಾಧವ್ ಎರಡನೇ ಭೇಟಿಗೆ ಭಾರತದ ಕಾನ್ಸುಲರ್ಗೆ ಅನುಮತಿ ನೀಡಲಾಗಿದೆ ಎಂದು ಹೈಕಮಿಷನ್ ಕಚೇರಿಯಲ್ಲಿರುವ ಭಾರತೀಯ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಕುಲಭೂಷಣ್ ಜಾಧವ್ ಕಾನ್ಸುಲರ್ ಭೇಟಿಗೆ ಮರುಪರಿಶೀಲನಾ ಅರ್ಜಿ ಸಲ್ಲಿಕೆಗೆ ನಿರಾಕರಿಸಿದ್ದಾರೆಂದು ಪಾಕ್ ಇತ್ತೀಚೆಗೆ ಹೇಳಿಕೊಂಡಿತ್ತು. ಇದರ ಬೆನ್ನಲ್ಲೆ ಭಾರತ ಕಾನ್ಸುಲರ್ ಭೇಟಿಗೆ ಷರತ್ತುರಹಿತ ಅವಕಾಶ ನೀಡಬೇಕೆಂದು ಪಾಕ್ಗೆ ಒತ್ತಾಯಿಸಿತ್ತು. ಈಗ ಭಾರತದ ಮನವಿಗೆ ಸಕಾರಾತ್ಮಕ ಸ್ಪಂದನೆ ನೀಡಿದ ಪಾಕ್ ಎರಡನೇ ಬಾರಿ ಕಾನ್ಸುಲರ್ ಭೇಟಿಗೆ ಅವಕಾಶ ನೀಡಲು ಅನುಮತಿ ನೀಡಿದೆ.
ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿಯಾಗಿದ್ದ ಜಾಧವ್‌ಗೆ 2017ರ ಏಪ್ರಿಲ್‌ನಲ್ಲಿ ಬೇಹುಗಾರಿಕೆ ಹಾಗೂ ಭಯೋತ್ಪಾದನೆ ಆಪಾದನೆಯ ಮೇಲೆ ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿತ್ತು.
ಇದನ್ನು ವಿರೋಧಿಸಿರುವ ಭಾರತ ಅಂತಾರಾಷ್ಟ್ರೀಯ ನ್ಯಾಯಾಲಯ ಮೂಲಕ ಗಲ್ಲಿಗೇರಿಸುವುದನ್ನು ತಡೆದಿತ್ತು. ಕಳೆದ ವರ್ಷ ಜುಲೈನಲ್ಲಿ ಹೇಗ್ ಮೂಲದ ನ್ಯಾಯಾಲಯ ಪಾಕಿಸ್ತಾನವು ಜಾಧವ್‌ಗೆ ಶಿಕ್ಷೆ ವಿಧಿಸುವ ಕುರಿತು ಮರುಪರಿಶೀಲನೆ ಮಾಡಿ, ಕಾನ್ಸುಲರ್ ಭೇಟಿಗೆ ಪ್ರವೇಶ ನೀಡಬೇಕೆಂದು ತೀರ್ಪು ನೀಡಿತ್ತು. ಆದರೆ ಮರುಪರಿಶೀಲನಾ ಅರ್ಜಿ ಸಲ್ಲಿಕೆಗೆ ಜಾಧವ್ ನಿರಾಕರಿಸಿದ್ದಾರೆ ಎಂದು ಕಳೆದ ವಾರ ಪಾಕಿಸ್ತಾನ ಹೇಳಿತ್ತು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಭಾರತ, ಪಾಕಿಸ್ತಾನವು ಈ ವಿಚಾರದಲ್ಲಿ ನಾಟಕವಾಡುತ್ತಿದೆ. ಬಲವಂತವಾಗಿ ಜಾಧವ್ರ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದೆ ಎಂದು ಆರೋಪಿಸಿದ ಬೆನ್ನಲ್ಲೇ ಭಾರತದ ಕಾನ್ಸುಲರ್ ಭೇಟಿಗೆ ಅವಕಾಶ ನೀಡಲಾಗಿದೆ.