ನವದೆಹಲಿ: ದೇಶಾದ್ಯಂತ ಕೊರೊನಾ ವೈರಸ್ ಹಾವಳಿ ಜೋರಾಗಿದ್ದು, ಇದರ ಕರಿನೆರಳು 74ನೇ ಸ್ವಾತಂತ್ರ್ಯೋತ್ಸವದ ಮೇಲೂ ಬಿದ್ದಿದೆ. ಹೀಗಾಗಿ ಸರಳವಾಗಿ ಆಚರಣೆ ಮಾಡಲು ನಿರ್ಧರಿಸಲಾಗಿದೆ.
ಕೊರೊನಾ ವೈರಸ್ ಕಾರಣ ಸಾಮಾಜಿಕ ಅಂತರ ಕಾಯ್ದುಕೊಂಡು ಕೆಂಪು ಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣದಲ್ಲಿ ಭಾಗಿಯಾಗಲಿದ್ದಾರೆ. ಆದರೆ, ಪ್ರತಿ ಸಲದಂತೆ ಹೆಚ್ಚಿನ ಅತಿಥಿಗಳಿಗೆ ಆಹ್ವಾನ ನೀಡಿಲ್ಲ. ಕೇವಲ ಬೆರಳೆಣಿಕೆಯಷ್ಟು ಗಣ್ಯರು ಭಾಗಿಯಾಗಲಿದ್ದು, ಮಕ್ಕಳಿಗೆ ಈ ಸಲ ಆಹ್ವಾನ ನೀಡಲ್ಲ. ಪೊಲೀಸರು ಪಿಪಿಇ ಕಿಟ್ ಧರಿಸಿಕೊಂಡು ಇದರಲ್ಲಿ ಭಾಗಿಯಾಗಲಿದ್ದಾರೆ. ಕಳೆದ ವರ್ಷ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅತಿಥಿಗಳಲ್ಲಿ ಐದನೇ ಒಂದು ಭಾಗದಷ್ಟು ಮಾತ್ರ ಗಣ್ಯರು ಇರಲಿದ್ದು, 140 ಪ್ರಮುಖ ಅತಿಥಿಗಳು, ಕ್ಯಾಬಿನೆಟ್ ಮಂತ್ರಿಗಳು, ಹಿರಿಯ ಅಧಿಕಾರಿಗಳು ಮತ್ತು ಸುಪ್ರೀಂಕೋರ್ಟ್ನ ನ್ಯಾಯಮೂರ್ತಿಗಳು ಉಪಸ್ಥಿತರಿರಲಿದ್ದಾರೆ.
ನಾಳೆ 7ನೇ ಬಾರಿ ಕೆಂಪುಕೋಟೆಯಿಂದ ನಮೋ ಭಾಷಣ... ಮೋದಿ ಸ್ವಾತಂತ್ರ್ಯ ದಿನದ ಭಾಷಣಗಳತ್ತ ಒಂದು ನೋಟ!
ಕಳೆದ ವರ್ಷ ಸಮಾರಂಭದಲ್ಲಿ 800 - 900 ಅತಿಥಿಗಳು ಭಾಗಿಯಾಗಿದ್ದರು. ವಿವಿಐಪಿ ಅತಿಥಿಗಳು ತಮ್ಮ ಸಂಗಾತಿಗಳೊಂದಿಗೆ ಆಗಮಿಸಿದ್ದರು. ಆದರೆ, ಈ ಸಲ ಇದಕ್ಕೆ ಬ್ರೇಕ್ ಹಾಕಲಾಗಿದೆ. ಜತೆಗೆ ಸ್ವಾತಂತ್ರ್ಯ ಹೋರಾಟಗಾರರಿಗೆ ಅವಕಾಶ ನೀಡಿಲ್ಲ.
ಸುಮಾರು 350 ಪೊಲೀಸ್ ಸಿಬ್ಬಂದಿ ಇರಲಿದ್ದು, ಇವರಲ್ಲಿ 100 ಮಂದಿ ಮೋದಿ ಭದ್ರತೆಗೆ ನಿಲ್ಲಲಿದ್ದಾರೆ. ವಿಶೇಷವಾಗಿ ಸುಮಾರು 1,500 ಕೊರೊನಾ ವಾರಿಯರ್ಸ್ಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ. ಕೆಂಪು ಕೋಟೆಯಲ್ಲಿ 300 ಸಿಸಿಟಿವಿ ಅಳವಡಿಕೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಭಾಗಿಯಾಗುವ ಪ್ರತಿಯೊಬ್ಬರಿಗೂ ಮಾಸ್ಕ್ ಕಡ್ಡಾಯವಾಗಿದ್ದು, ವ್ಯಕ್ತಿಗತ ಅಂತರ ಕಾಪಾಡಿಕೊಂಡು ಎಲ್ಲರೂ ಕುಳಿತುಕೊಳ್ಳಲಿದ್ದಾರೆ.