ಕೊಚ್ಚಿ(ಕೇರಳ): ಭಾರತೀಯ ನೌಕಾಸೇನೆಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಇಬ್ಬರು ಮಹಿಳಾ ಅಧಿಕಾರಿಗಳಿಗೆ ಅವಕಾಶ ನೀಡಲಾಗಿದೆ. ಸಬ್ ಲೆಫ್ಟಿನೆಂಟ್ ಕುಮದಿನಿ ತ್ಯಾಗಿ ಹಾಗೂ ಸಬ್ ಲೆಫ್ಟಿನೆಂಟ್ ರಿತಿ ಸಿಂಗ್ ಅವರು ಯುದ್ಧ ಹಡಗಿನಲ್ಲಿ ಕರ್ತವ್ಯಕ್ಕೆ ಆಯ್ಕೆಯಾಗಿದ್ದಾರೆ.

ಭಾರತೀಯ ನೌಕಾಸೇನೆಯ ಐಎನ್ಎಸ್ ಗರುಡ ಯುದ್ಧ ಹಡಗಿನಲ್ಲಿ ಇವರು ಕರ್ತವ್ಯ ನಿರ್ವಹಿಸಲಿದ್ದು, ಇಂದು ಕೇರಳದ ಕೊಚ್ಚಿನ್ ನೌಕಾನೆಲೆಯಲ್ಲಿ ನಡೆದ ಸಮಾರಂಭದಲ್ಲಿ ಕುಮುದಿನಿ ತ್ಯಾಗಿ ಹಾಗೂ ರಿತಿ ಸಿಂಗ್ ಅವರನ್ನ ಅಧಿಕೃತವಾಗಿ ಸೇರ್ಪಡೆಗೊಳಿಸಲಾಗಿದೆ.

ಭಾರತೀಯ ನೌಕಾಪಡೆಯಲ್ಲಿ ಲಿಂಗ ಸಮಾನತೆ ನಿರ್ಮಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಈಗಾಗಲೇ ನೌಕಾಪಡೆ ಹಲವಾರು ಮಹಿಳಾ ಅಧಿಕಾರಿಗಳನ್ನ ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಂಡಿದೆ. ಆದರೆ ಹಲವಾರು ಕಾರಣಗಳಿಂದಾಗಿ ಯುದ್ಧನೌಕೆಯಲ್ಲಿ ಸೇರಿಸಿಕೊಂಡಿರಲಿಲ್ಲ.
ಇದೀಗ ಇಬ್ಬರು ಮಹಿಳಾ ಅಧಿಕಾರಿಗಳು ಎಂಹೆಚ್-60 ಆರ್ ಹೆಲಿಕಾಪ್ಟರ್ ಹಾರಾಟ ನಡೆಸುವ ನಿರೀಕ್ಷೆಯಿದೆ.