ಅಮರಾವತಿ (ಮಹಾರಾಷ್ಟ್ರ) : ಹಬ್ಬ ಹರಿದಿನಗಳು ಸಮೀಪಿಸುತ್ತಿದ್ದಂತೆ ಮಾರುಕಟ್ಟೆಗೆ ವಿಧ ವಿಧದ ತಿಂಡಿ ತಿನಿಸುಗಳು ಲಗ್ಗೆಯಿಡುತ್ತವೆ. ಹಬ್ಬದ ಸಂತೋಷ ಇಮ್ಮಡಿಗೊಳಿಸುವಲ್ಲಿ ಸಿಹಿ ತಿಂಡಿಗಳ ಪಾತ್ರವೂ ಅತೀ ಮುಖ್ಯವಾಗಿದೆ. ಜನರನ್ನ ಆಕರ್ಷಿಸಿಲು ಸಿಹಿ ತಿಂಡಿ ಮಾರಾಟಗಾರರು ಕೂಡ ವಿಶಿಷ್ಟ ತಿಂಡಿಗಳನ್ನು ತಯಾರಿಸಿಡುತ್ತಾರೆ.
ದೀಪಾವಳಿ ಹಬ್ಬ ಸಮೀಪಿಸುತ್ತಿದ್ದಂತೆ ಮಹಾರಾಷ್ಟ್ರದ ಅಮರಾವತಿಯ ಸಿಹಿ ತಿಂಡಿ ಮಾರಾಟಗಾರ ರಘುವೀರ್ ಮಥೈ, ಚಿನ್ನ ಲೇಪಿತ 'ಸೊನಾರಿ ಭೋಗ್' ಎಂಬ ವಿಶಿಷ್ಟ ತಿಂಡಿಯೊಂದನ್ನು ಮಾರಾಟಕ್ಕಿಟ್ಟಿದ್ದಾರೆ. ಶುದ್ದ 24 ಕ್ಯಾರೆಟ್ ಚಿನ್ನ ಲೇಪಿತ ಈ ಸಿಹಿ ತಿಂಡಿಯ ಬೆಲೆ, ಕೆ.ಜಿಗೆ ಬರೋಬ್ಬರಿ 7 ಸಾವಿರ ರೂ. ಹಾಜಝೆಲ್ ನಟ್, ಶುದ್ಧ ಫಿಸ್ತಾ , ಆಮ್ರಾ ಬಾದಾಮಿ ಮತ್ತು ಕೇಸರಿಯನ್ನು ಬಳಸಿ, ರಾಜಸ್ಥಾನದ ಕುಶಲಕರ್ಮಿಗಳು ಈ ತಿಂಡಿಯನ್ನು ತಯಾರಿಸಿದ್ದಾರೆ.
ಸದ್ಯ, ಸೊನಾರಿ ಭೋಗ್ ಸಿಹಿ ತಿಂಡಿ ಗ್ರಾಹಕರ ಆಕರ್ಷಣೆಯ ಕೇಂದ್ರವಾಗಿದ್ದು, ಈ ತಿಂಡಿಯನ್ನು ಖರೀದಿಸಲು ದೂರದ ಊರುಗಳಿಂದಲೂ ಜನರು ಬರುತ್ತಿದ್ದಾರಂತೆ. ಈ ತಿಂಡಿ ಮಾರಾಟಕ್ಕೆ ಸರ್ಕಾರದ ಆಹಾರ ಮತ್ತು ಔಷಧ ಮಂಡಳಿ ಅನುಮತಿಯು ನೀಡಿದೆ ಎಂದು ತಿಳಿದು ಬಂದಿದೆ.