ಶ್ರೀನಗರ: ಜಮ್ಮು ಕಾಶ್ಮೀರವನ್ನ ಪ್ರತ್ಯೇಕಗೊಳಿಸಿರುವ ಭಾರತ ಸರ್ಕಾರದ ಕ್ರಮವನ್ನ ಅರಗಿಸಿಕೊಳ್ಳಲು ಪಾಕಿಸ್ತಾನಕ್ಕೆ ಸಾಧ್ಯವಾಗುತ್ತಿಲ್ಲ. ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಈ ವಿಷಯ ಪ್ರಸ್ತಾಪಿಸಿ ಮುಖಭಂಗಕ್ಕೊಳಗಾಗಿರುವ ಪಾಕಿಸ್ತಾನ ತನ್ನ ಹಳೆ ಚಾಳಿಯನ್ನ ಮಾತ್ರ ಬಿಟ್ಟಿಲ್ಲ.
ಈ ಬಗ್ಗೆ ಮಾತನಾಡಿರುವ ಪಾಕಿಸ್ತಾನ ಪ್ರಧಾನಿ ಇಮ್ರಾನ್ಖಾನ್, ಕಾಶ್ಮೀರಿಗಳ ಸಮಸ್ಯೆಗಳನ್ನ ಪಾಕಿಸ್ತಾನ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪ್ರಸ್ತಾಪಿಸುತ್ತೆ. ಅವರ ರಾಯಭಾರಿಯಾಗಿ ಕೆಲಸ ಮಾಡುತ್ತೇನೆ ಎಂದು ಘೋಷಣೆ ಮಾಡಿದ್ದಾರೆ. ಆಗಸ್ಟ್ 5 ಜಮ್ಮು ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನವನ್ನ ರದ್ದುಗೊಳಿಸಿ ಕೇಂದ್ರ ಸರ್ಕಾರ, ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಘೋಷಣೆ ಮಾಡಿತ್ತು. ಈ ಹಿನ್ನೆಲೆಯಲ್ಲಿ 2020 ಆಗಸ್ಟ್ 5 ಕ್ಕೆ ಈ ಐತಿಹಾಸಿಕ ತೀರ್ಮಾನ ಕೈಗೊಂಡು ಒಂದು ವರ್ಷವಾಗಲಿದೆ. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರ ತನ್ನ ನಿರ್ಣಯದಲ್ಲಿ ಈಗ ಸಫಲವಾಗಿರಬಹುದು, ಆದರೆ ಪಾಕಿಸ್ತಾನ ಭಾರತ ಅದರ ಯಶಸ್ಸನ್ನು ಬಹಳ ದಿನಗಳ ಕಾಲ ಇಟ್ಟುಕೊಳ್ಳಲು ಬಿಡುವುದಿಲ್ಲ ಎಂದು ಪಾಕಿಸ್ತಾನ ಪ್ರಧಾನಿ ಹೇಳಿದ್ದಾರೆ.
ನಿನ್ನೆ ನಡೆದ ಪಾಕಿಸ್ತಾನದ ರಾಜ್ಯಗಳ ಪ್ರಮುಖರ ಸಭೆಯಲ್ಲಿ ಜಮ್ಮು- ಕಾಶ್ಮೀರದ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿ ಈ ಹೇಳಿಕೆ ನೀಡಿದ್ದಾರೆ.