ಮುಂಬೈ: ಬಿಜೆಪಿ ಜೊತೆಗಿನ ಮಾತುಕತೆಗಾಗಿ ನಾವು ಬಾಗಿಲು ತೆರೆದಿಟ್ಟಿದ್ದೇವೆ. ಸರ್ಕಾರ ರಚನೆ ಸಂಬಂಧ ಎನ್ಸಿಪಿ ಜತೆ ಮೈತ್ರಿ ವಿಚಾರವಾಗಿ ಮಾತನಾಡಿಲ್ಲ. ಚುನಾವಣೆಗೂ ಮುಂಚಿತವಾಗಿ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳಬಾರದಿತ್ತು ಎಂಬುದು ನಮಗೀಗ ಅರಿವಾಗುತ್ತಿದೆ ಎಂದು ಶಿವಸೇನೆ ಮುಖ್ಯಸ್ಥ ಉದ್ದವ್ ಠಾಕ್ರೆ ತೀವ್ರ ಅಸಮಾಧಾನ ಹೊರಹಾಕಿದ್ರು.
ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ವಿರುದ್ಧ ತಿಕ್ಷ್ಣ ಟೀಕಾಪ್ರಹಾರ ನಡೆಸಿದರು.
ಶಿವಸೇನೆಗೆ ಮುಖ್ಯಮಂತ್ರಿ ಪದವಿ ಬಿಟ್ಟುಕೊಡುವ ವಿಚಾರವಾಗಿ ನಾನು ಅಮಿತ್ ಶಾ ಅವರೊಂದಿಗೆ ಮಾತನಾಡಿರುವೆ. ಕೇವಲ ಉಪಮುಖ್ಯಮಂತ್ರಿ ಹುದ್ದೆಗೆ ತೃಪ್ತಿಪಡುವುದು ನಮಗೆ ಇಷ್ಟವಿಲ್ಲ. ಕಳೆದ 25 ವರ್ಷಗಳಿಂದ ಬಿಜೆಪಿ ಜತೆ ಕೈಜೋಡಿಸಿದ್ದೇವೆ. ಶಿವಸೇನೆ ಶಾಸಕನನ್ನೆ ಮುಖ್ಯಮಂತ್ರಿ ಮಾಡುವುದಾಗಿ ನಾನು ಈಗಾಗಲೇ ಮಾತು ನೀಡಿರುವುದಾಗಿ ಅವರು ಸ್ಪಷ್ಟಪಡಿಸಿದ್ರು.
ಗಂಗಾ ನದಿ ಶುದ್ಧೀಕರಣ ಮಾಡಲು ಮುಂದಾಗಿರುವ ಬಿಜೆಪಿ ಮುಖಂಡರ ಮನಸ್ಸು ಕಲುಷಿತಗೊಂಡಿರುವುದು ನಿಜಕ್ಕೂ ದುಃಖಕರ ವಿಚಾರ. ಒಂದು ದಿನ ಮಹಾರಾಷ್ಟ್ರದಲ್ಲಿ ಶಿವಸೇನೆಯ ವ್ಯಕ್ತಿ ಮುಖ್ಯಮಂತ್ರಿಯಾಗುತ್ತಾರೆ ಎಂದು ಈ ಹಿಂದೆ ನಾನು ತಂದೆ ಬಾಳಾ ಸಾಹೇಬ್ ಅವರಿಗೆ ಮಾತು ನೀಡಿದ್ದೇನೆ. ಅವರ ಭರವಸೆ ಈಡೇರಿಸುವುದೇ ನನ್ನ ಪ್ರಥಮ ಆದ್ಯತೆ ಎಂದಿರುವ ಉದ್ಧವ್, ಇದಕ್ಕಾಗಿ ನನಗೆ ಅಮಿತ್ ಶಾ ಅಥವಾ ದೇವೇಂದ್ರ ಫಡ್ನವೀಸ್ ಬೇಕಾಗಿಲ್ಲ ಎಂದರು.