ಹೈದರಾಬಾದ್: 'ವೈದ್ಯೋ ನಾರಾಯಣೋ ಹರಿ' ಎಂಬ ಮಾತು ಸದ್ಯದ ಪರಿಸ್ಥಿತಿಯಲ್ಲಿ ಅಕ್ಷರಶ: ನಿಜ ಎನಿಸಿದೆ. ಒಂದೆಡೆ ಜನರ ಜೀವಗಳನ್ನು ಬಲಿ ಪಡೆಯುತ್ತಿರುವ ಕೊರೊನಾಗೆ ಜನರು ಭಯ ಬೀಳುತ್ತಿರುವ ಸಮಯದಲ್ಲಿ ಮತ್ತೊಂದೆಡೆ ತಮ್ಮ ಜೀವವನ್ನೂ ಲೆಕ್ಕಿಸದೆ ವೈದ್ಯರು ಸೋಂಕಿತರಿಗೆ ಚಿಕಿತ್ಸೆ ನೀಡುತ್ತಾ ಬಂದಿದ್ದಾರೆ.
ಹೈದರಾಬಾದ್ನಲ್ಲಿ ಒಂದೇ ಕುಟುಂಬದ ಮೂವರು ವೈದ್ಯರು ಇದೀಗ ಆಸ್ಪತ್ರೆಯಲ್ಲಿ ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಪತಿ, ಪತ್ನಿ ಹಾಗೂ ಮಗಳು ಮೂವರೂ ವೈದ್ಯರೇ. ಡಾ, ಮೆಹಬೂಬ್ ಖಾನ್ ಹೈದರಾಬಾದ್ ಎದೆ ರೋಗಿಗಳ ಆಸ್ಪತ್ರೆಯಲ್ಲಿ ವೈದ್ಯಕೀಯ ಅಧೀಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ಧಾರೆ. ಉಸಿರಾಟದ ಕಾಯಿಲೆಯಿಂದ ಬಳಲುತ್ತಿರುವವರಿಗೆ ಚಿಕಿತ್ಸೆ ನೀಡುವಲ್ಲಿ ಮೆಹಬೂಬ್ ಖಾನ್ ಪರಿಣಿತರು. ಇದೀಗ ಈ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿ ಚಿಕಿತ್ಸೆ ಪಡೆದ ಇಂಡೋನೇಷ್ಯಾದ 9 ಮಂದಿ ಕೊರೊನಾ ಪೀಡಿತರು ಇದೀಗ ಗುಣಮುಖರಾಗಿದ್ದು ಇವರಿಗೆ ನೀಡಿದ ಚಿಕಿತ್ಸೆಯಲ್ಲಿ ಮೆಹಬೂಬ್ ಖಾನ್ ಅವರ ಪಾತ್ರ ಬಹಳ ಮಹತ್ವದ್ದು ಎನ್ನಲಾಗಿದೆ.
ಇನ್ನು ಮೆಹಬೂಬ್ ಖಾನ್ ಅವರ ಪತ್ನಿ ಶಹಾನ ಖಾನ್ ಕೂಡಾ ವೈದ್ಯರು. ಇವರು ಗಾಂಧಿ ಆಸ್ಪತ್ರೆಯಲ್ಲಿ ಚರ್ಮರೋಗ ತಜ್ಞೆಯಾಗಿ ಕೆಲಸ ಮಾಡುತ್ತಿದ್ದಾರೆ. ಸದ್ಯಕ್ಕೆ ಕೊರೊನಾ ರೋಗಿಗಳಿರುವ ವಾರ್ಡಿನಲ್ಲಿ ಇವರು ಸೇವೆ ಸಲ್ಲಿಸುತ್ತಿದ್ದಾರೆ. ಇನ್ನು ಮೆಹಬೂಬ್ ಖಾನ್ ಹಾಗೂ ಶಹಾನ ಖಾನ್ ದಂಪತಿ ಪುತ್ರಿ ರಶಿಕಾ ಖಾನ್ ಕೂಡಾ ಡಾಕ್ಟರ್. ಹೈದರಾಬಾದ್ನ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದು ಇವರು ಕೂಡಾ ಕೊರೊನಾ ಬಾಧಿತರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಒಟ್ಟಿನಲ್ಲಿ ತಮ್ಮ ಜೀವವನ್ನೇ ಪಣಕ್ಕಿಟ್ಟು ಮಾರಕ ಕೊರೊನಾ ಪೀಡಿತರಿಗೆ ಚಿಕಿತ್ಸೆ ನೀಡುತ್ತಿರುವ ಈ ವೈದ್ಯರ ಕಾರ್ಯವನ್ನು ಮೆಚ್ಚಲೇಬೇಕು.