ನವದೆಹಲಿ : ಮನೆಯಲ್ಲಿ ಗಂಡ-ಹೆಂಡತಿ ಮಧ್ಯೆ ಜಗಳವಾದ್ರೇ ಪರಸ್ಪರರು ಊಟ ಬಿಡ್ತಾರೆ, ಮಾತೂ ಆಡದಿರಬಹುದೇನೋ.. ಆದರೆ, ಏರ್ ಇಂಡಿಯಾದಲ್ಲಿ ಸಹೋದ್ಯೋಗಿಗಳ ಮಧ್ಯೆ ನಡೆದ ಜಗಳದಿಂದಾಗಿ ನೂರಾರು ಮಂದಿ ಪ್ರಯಾಣಿಸಬೇಕಿದ್ದ ವಿಮಾನ 1 ಗಂಟೆ ತಡವಾಗಿತ್ತು. ಆ ಜಗಳಕ್ಕೆ ಕಾರಣ ಏನು ಅಂತಾ ತನಿಖೆ ನಡೆಸಿದಾಗ ಅಚ್ಚರಿಯ ಸಂಗತಿ ಹೊರ ಬಂದಿತ್ತು.
ಜನವರಿ 17, 2019ರಂದು ಈ ಘಟನೆ ನಡೆದಿದೆ. ಏರ್ ಇಂಡಿಯಾ ಪೈಲೆಟ್, ಮಹಿಳಾ ಸಹೋದ್ಯೋಗಿಗೆ ಊಟವಾದ ಮೇಲೆ ಪಾತ್ರೆ ತೊಳೆಯೋಕೆ ಹೇಳಿದ್ದನಂತೆ. ಆದರೆ, ಇದಕ್ಕೆ ಆಕೆ ಒಪ್ಪಿಲ್ಲ. ಇದರಿಂದಾಗಿ ಮಹಿಳಾ ಸಿಬ್ಬಂದಿ ಜತೆಗೆ ಜಗಳ ಶುರುವಾಗಿದೆ. ಇಬ್ಬರು ಪ್ರಯಾಣಿಕರ ಎದುರೇ ಇಬ್ಬರೂ ಮಾತಿನ ಕದನ ನಡೆಸಿದ್ದಾರೆ. ಇಂದರಿಂದಾಗಿ ಏರ್ ಇಂಡಿಯಾದ ಬೆಂಗಳೂರು-ನವದೆಹಲಿ ವಿಮಾನ ಜನವರಿ 17ರಂದು 1 ಗಂಟೆ ತಡವಾಗಿ ಟೇಕಾಫ್ ಆಗಿತ್ತು. ಇದೇ ವಿಚಾರವಾಗಿ ಏವಿಯೇಷನ್ ರೆಗ್ಯುಲೇಟರ್ ಡೈರೆಕ್ಟೋರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ ತನಿಖೆಗೆ ಸೂಚಿಸಿತ್ತು. ಏರ್ ಇಂಡಿಯಾದ ಹಿರಿಯ ಅಧಿಕಾರಿ ನೇತೃತ್ವದಲ್ಲಿ ತನಿಖೆ ಕೂಡ ನಡೆದಿತ್ತು. ಈಗ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಆದೇಶವೂ ಹೊರ ಬಿದ್ದಿದೆ. ಅಷ್ಟೇ ಅಲ್ಲ, ಮಹಿಳಾ ಸಿಬ್ಬಂದಿ ಮತ್ತು ಪೈಲಟ್‌ಗೆ ಏರ್ ಇಂಡಿಯಾ ಆಡಳಿತ ಮಂಡಳಿ ನೋಟಿಸ್ ಕೂಡ ಜಾರಿ ಮಾಡಿದೆ.
ಪೈಲಟ್ ವಿರುದ್ಧ ಲೇಡಿ ಪೈಲೆಟ್ ಲೈಂಗಿಕ ಕಿರುಕುಳದ ಆರೋಪ :
ಏರ್ ಇಂಡಿಯಾ ಮಹಿಳಾ ಪೈಲೆಟ್ ಹಿಂದಿನ ತಿಂಗಳಷ್ಟೆ ತನ್ನ ಸೀನಿಯರ್ ಪೈಲೆಟ್ ಮೇಲೆ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದರು. ಈ ಬಗ್ಗೆ ಏರ್ ಇಂಡಿಯಾಗೆ ದೂರು ಕೂಡ ನೀಡಿದ್ದರು. ಸೀನಿಯರ್ ಪೈಲೆಟ್ ಅವತ್ತು ಒಂದು ದಿನ ಪ್ರಶಿಕ್ಷಣಾರ್ಥಿ ಮಹಿಳಾ ಪೈಲೆಟ್‌ನ ವಿಶ್ರಾಂತಿ ಕೊಠಡಿಗೆ ಊಟಕ್ಕೆ ಕರೆದಿದ್ದನಂತೆ. ಆಕೆಯೊಂದಿಗೆ ಆಕೆಯ ವೈವಾಹಿಕ ಜೀವನದ ಬಗ್ಗೆ ಅಸಭ್ಯವಾಗಿ ಮಾತನಾಡಿದ್ದನಂತೆ. ಅದು ಹಿರಿಯ ಪೈಲೆಟ್ ತನ್ನ ಜತೆಗೆ ಅಸಹಜವಾಗಿ ವರ್ತಿಸಿದ್ದರು ಅಂತಾ ಪ್ರಶಿಕ್ಷಣಾರ್ಥಿ ಮಹಿಳಾ ಪೈಲೆಟ್ ಆರೋಪಿಸಿದ್ದರು. ಈ ಘಟನೆ ಹೈದರಾಬಾದ್ನಲ್ಲಿ ನಡೆದಿದ್ದು, ಈ ಸಂಬಂಧ ಏರ್ ಇಂಡಿಯಾ ತನಿಖೆ ಕೂಡ ನಡೆಸಿ ಆ ಬಗೆಗಿನ ತೀರ್ಪು ಕೂಡ ಹೊರಬಂದಿದೆ.