ಅಹಮದಾಬಾದ್ (ಗುಜರಾತ್): ಮಾಳಿಗೆ ಮೇಲೆ ಪಾರ್ಟಿ ಮಾಡ್ತೀವಿ, ಊರ ಹೊರಗೆ ಆಟ ಆಡ್ತೀವಿ... ಪೊಲೀಸರಿಗೆ ಗೊತ್ತಾಗಲ್ಲ ಬಿಡಿ ಅಂದ್ಕೊಂಡಿದ್ರೆ ಹುಷಾರ್! ನೀವೆಲ್ಲಿದ್ರೂ ಕಂಡು ಹಿಡಿದು ಕ್ಷಣಾರ್ಧದಲ್ಲಿ ಪೊಲೀಸರಿಗೆ ತಿಳಿಸುತ್ತವೆ ಡ್ರೋನ್ ಕ್ಯಾಮೆರಾಗಳು. ಹಲವಾರು ರಾಜ್ಯಗಳ ಪೊಲೀಸರು ಡ್ರೋನ್ ಬಳಸಲು ಈಗಾಗಲೇ ಆರಂಭಿಸಿದ್ದು, ಗುಜರಾತ್ ಪೊಲೀಸರು ಸಹ ಈ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.
ಗುಜರಾತ್ ರಾಜ್ಯಾದ್ಯಂತ ಬರೋಬ್ಬರಿ 200 ಡ್ರೋನ್ ಕ್ಯಾಮರಾಗಳು ಆಕಾಶದಲ್ಲಿ ಹಾರಾಡುತ್ತಿದ್ದು, ಲಾಕ್ಡೌನ್ ಉಲ್ಲಂಘಿಸುವವರ ಮೇಲೆ ಹದ್ದಿನ ಕಣ್ಣಿಟ್ಟಿವೆ. ನಿಯಮ ಉಲ್ಲಂಘಿಸಿ ಸುತ್ತಾಡುತ್ತಿದ್ದ 7,000 ಜನರನ್ನು ಡ್ರೋನ್ ಸಹಾಯದಿಂದ ಅರೆಸ್ಟ್ ಮಾಡಲಾಗಿದೆ ಎಂದು ಗುಜರಾತ್ ಪೊಲೀಸರು ತಿಳಿಸಿದ್ದಾರೆ.
"ಅಹಮದಾಬಾದ್ ಗ್ರಾಮೀಣ ಪೊಲೀಸರು ಸಹ ಡ್ರೋನ್ ಬಳಸಲಾರಂಭಿಸಿದ್ದಾರೆ. ಇವುಗಳ ಸಹಾಯದಿಂದ ಪ್ರತಿದಿನ ಸರಾಸರಿ 10 ರಿಂದ 12 ಜನ ನಿಯಮ ಉಲ್ಲಂಘಿಸಿದ್ದಕ್ಕಾಗಿ ಬಂಧಿತರಾಗುತ್ತಿದ್ದಾರೆ. ಇತ್ತೀಚೆಗೆ ಸಾರ್ವಜನಿಕ ಸ್ಥಳದಲ್ಲಿ ಜನರ ಗುಂಪೊಂದು ಜಮಾಯಿಸಿತ್ತು. ಡ್ರೋನ್ ನೋಡುತ್ತಲೇ ಎಲ್ಲರೂ ಓಡಿ ಹೋದರು. ಆದರೆ ಫೇಸ್ ರಿಕಗ್ನಿಷನ್ ಮೂಲಕ ಅವರೆಲ್ಲರನ್ನು ಬಂಧಿಸಲಾಯಿತು." ಎಂದು ಅಹಮದಾಬಾದ್ ಜಿಲ್ಲೆಯ ಡಿವೈಎಸ್ಪಿ ಎಸ್.ಎಚ್. ಸಾರಡಾ ಹೇಳಿದರು.
ಸೂರತ್ ನಗರದ ಮನೆ ಮಾಳಿಗೆ ಮೇಲೆ ನಡೆದಿದ್ದ ಪಕೋಡಾ ಪಾರ್ಟಿಯನ್ನು ಡ್ರೋನ್ ಕ್ಯಾಮೆರಾ ಸೆರೆಹಿಡಿದಿತ್ತು. ಗಲ್ಲಿಗಳ ಮೂಲೆಗಳಲ್ಲಿ ಕುಳಿತು ಜೂಜಾಡುವ ಅನೇಕರು ಡ್ರೋನ್ ಕ್ಯಾಮೆರಾ ಕಾರಣದಿಂದ ಜೈಲು ಪಾಲಾಗಿದ್ದಾರೆ. ಸುಲಭವಾಗಿ ತಲುಪಲಾಗದ ಸ್ಥಳಗಳಲ್ಲಿ ಲಾಕ್ಡೌನ್ ನಿಯಮಗಳು ಪಾಲನೆಯಾಗುವಂತೆ ನೋಡಿಕೊಳ್ಳುವಲ್ಲಿ ಡ್ರೋನ್ಗಳು ಪೊಲೀಸರಿಗೆ ವರದಾನವಾಗಿ ಪರಿಣಮಿಸಿವೆ.