ಅಯೋಧ್ಯಾ : ಅಯೋಧ್ಯೆಯ ಜನ್ಮಭೂಮಿಯಲ್ಲಿ ಶ್ರೀರಾಮನ ಭವ್ಯ ಮಂದಿರ ನಿರ್ಮಾಣ ಭೂಮಿಪೂಜೆಯ ಐತಿಹಾಸಿಕ ಕ್ಷಣವನ್ನು ಸಾಕ್ಷೀಕರಿಸಲು ಇಂದು ಸಜ್ಜಾಗಿದೆ.
ದೇಶದ ವಿವಿಧೆಡೆಯಿಂದ ಬಂದ ಸಾಧು, ಸಂತರು ಮತ್ತು ಗಣ್ಯರ ಸಮ್ಮುಖದಲ್ಲಿ ಬುಧವಾರ ಮಧ್ಯಾಹ್ನ 12.30ರಿಂದ 12.40ರ ನಡುವೆ ಅಭಿಜಿನ್ ಮುಹೂರ್ತದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ರಾಮಮಂದಿರಕ್ಕೆ ಶಿಲಾನ್ಯಾಸ ಮಾಡಲಿದ್ದಾರೆ.
ಕಾರ್ಯಕ್ರಮಕ್ಕೆ 175 ಗಣ್ಯರನ್ನು ಆಹ್ವಾನಿಸಲಾಗಿದೆ. ಇದರಲ್ಲಿ 135 ಸಂತರಿದ್ದಾರೆ. ಅತಿಹೆಚ್ಚು ಅಧ್ಯಾತ್ಮ ಪರಂಪರೆಗಳನ್ನು ಪ್ರತಿನಿಧಿಸುವಂತೆ ಸಂತರನ್ನು ಆಯ್ಕೆ ಮಾಡಲಾಗಿದೆ. ಅಯೋಧ್ಯೆಯ ಕೆಲವು ಗಣ್ಯರನ್ನೂ ಆಹ್ವಾನಿಸಲಾಗಿದೆ. ಜನಕಪುರವು ಬಿಹಾರ, ಉತ್ತರ ಪ್ರದೇಶ ಮತ್ತು ಅಯೋಧ್ಯಾ ಜತೆಗೆ ನಂಟು ಹೊಂದಿತ್ತು ಎಂಬ ಕಾರಣಕ್ಕೆ ನೇಪಾಳದ ಸಂತರನ್ನೂ ಆಹ್ವಾನಿಸಲಾಗಿದೆ.
ಇವರಲ್ಲದೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಸೇರಿದಂತೆ 50 ವಿಐಪಿಗಳು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.