ಗೋದಾವರಿ (ಆಂಧ್ರಪ್ರದೇಶ): ಗೋದಾವರಿ ನದಿ ಉಕ್ಕಿ ಹರಿಯುತ್ತಿದ್ದು, ಗೋದಾವರಿ ಜಿಲ್ಲೆಯ ಕೆಲವು ಗ್ರಾಮಗಳು ಪ್ರವಾಹ ಭೀತಿಯಲ್ಲಿವೆ. ಧವಲೇಶ್ವರಂ ಬ್ಯಾರೇಜ್ ಪ್ರವಾಹದ ಹಂತದಲ್ಲಿದ್ದು, ತಗ್ಗು ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರಿಗೆ ಅಧಿಕಾರಿಗಳು ಎರಡನೇ ಹಂತದ ತುರ್ತು ಎಚ್ಚರಿಕೆ ನೀಡಿದ್ದಾರೆ.
ಅಣೆಕಟ್ಟೆಯ ನೀರಿನ ಮಟ್ಟ 14.9 ಅಡಿ ತಲುಪಿದ್ದು, 14.5 ಲಕ್ಷ ಕ್ಯೂಸೆಕ್ ನೀರನ್ನು ಸಮುದ್ರಕ್ಕೆ ಬಿಡಲಾಗುತ್ತಿದೆ. ಪೂರ್ವ ಗೋದಾವರಿ ಜಿಲ್ಲೆಯಲ್ಲಿ 19 ಪ್ರದೇಶಗಳು ಅಪಾಯದಲ್ಲಿವೆ. ಜಿಲ್ಲೆಯ ದೇವಿಪಟ್ಟಣ ಮಂಡಲದ 36 ಗ್ರಾಮಗಳ ರಸ್ತೆ ಸಂಪರ್ಕ ಕಡಿತವಾಗಿದೆ. ರಾಜ್ಯ ವಿಪತ್ತು ಪಡೆ ಸೇರಿದಂತೆ 32 ರಕ್ಷಣಾ ತಂಡಗಳು ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿವೆ.
ಪ್ರವಾಹಕ್ಕೆ ಒಳಗಾದ ಕೋನಸೀಮಾ:
ಗೋದಾವರಿಯಲ್ಲಿ ನೀರು ಹೆಚ್ಚುತ್ತಿರುವ ಹಿನ್ನೆಲೆ ಕೋನಸೀಮಾ ಪ್ರದೇಶವು ಪ್ರವಾಹಕ್ಕೆ ಸಿಲುಕಿದೆ. ಎರಡು ಸೇತುವೆಗಳು ಮುಳುಗಿದ್ದು, 10 ಹಳ್ಳಿಗಳು ಪ್ರವಾಹದಲ್ಲಿ ಸಿಲುಕಿವೆ. ಅಲ್ಲದೇ 100 ಎಕರೆ ಬೆಳೆ ನಾಶವಾಗಿದೆ. ಪೋಲವರಂ ಸೈಟ್ ಕೂಡ ಗೋದಾವರಿಯ ಪ್ರವಾಹಕ್ಕೆ ತುತ್ತಾಗಿದ್ದು, ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ಯೆರ್ಕಾಲುವಾ ದಾಟುತ್ತಿದ್ದಾಗ ವ್ಯಕ್ತಿಯೊಬ್ಬ ಮುಳುಗಿ ಸಾವನ್ನಪ್ಪಿದ್ದಾನೆ.