ನವದೆಹಲಿ: 2019ರ ಲೋಕಸಭೆ ಚುನಾವಣೆಯಲ್ಲಿ ಬಳಕೆಯಾದ ಅಥವಾ ಮುದ್ರಿತವಾದ ವಿವಿ ಪ್ಯಾಟ್ ಮತ ಚೀಟಿಗಳನ್ನು ಒಂದು ವರ್ಷದವರೆಗೂ ಉಳಿಸಿಕೊಳ್ಳಬೇಕು. ತದನಂತರ ಅವುಗಳನ್ನು ನಾಶಪಡಿಸಬಹುದು. ಆದರೆ, ನಾಲ್ಕು ತಿಂಗಳಲ್ಲೇ ಆ ಮತ ಚೀಟಿಗಳನ್ನು ನಾಶಪಡಿಸಲಾಗಿದೆ ಎಂದು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು ಸುಪ್ರೀಂಕೋರ್ಟ್ಗೆ ಮಾಹಿತಿ ನೀಡಿದರು.
ಚುನಾವಣಾ ದತ್ತಾಂಶದಲ್ಲಿ ಆದ ಲೋಪ - ದೋಷಗಳ ಕುರಿತು ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ಸುಪ್ರೀಂಕೋರ್ಟ್ನಲ್ಲಿ ನಡೆಯಿತು. ಆರ್ಟಿಐ ಆಧಾರದ ಮೂಲಕ ಮಾಹಿತಿ ಪಡೆದುಕೊಂಡಿದ್ದೇನೆ ಎಂದು ಭೂಷಣ್ ನ್ಯಾಯಪೀಠದ ಗಮನಕ್ಕೆ ತಂದರು.
ಒಂದು ವರ್ಷದವರೆಗೂ ಉಳಿಸಿಕೊಳ್ಳಬೇಕಾದ ಚುನಾವಣಾ ಆಯೋಗ, ನಾಲ್ಕು ತಿಂಗಳಲ್ಲೇ ನಾಶಪಡಿಸಿದ್ದೇಕೆ? ಎಂದು ಪ್ರಶ್ನಿಸಿದರು. ನಾಲ್ಕು ವಾರಗಳ ಬಳಿಕ ಉತ್ತರ ನೀಡುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್ ಇದೇ ವೇಳೆ, ನಿರ್ದೇಶನ ನೀಡಿತು.
ಮೊದಲು ಎರಡು ತಿಂಗಳ ಕಾಲಾವಕಾಶ ಬೇಕು ಎಂದು ಚುನಾವಣಾ ಆಯೋಗ ಕೋರಿದೆ. ಪ್ರಶಾಂತ್ ಭೂಷಣ್ ಇದಕ್ಕೆ ಆಕ್ಷೇಪಿಸಿದರು. ಸಿಜೆಐ ಎಸ್.ಎ.ಬೊಬ್ಡೆ ನೇತೃತ್ವದ ನ್ಯಾಯಪೀಠವು ನಾಲ್ಕು ವಾರಗಳ ನಂತರ ವಿಚಾರಣೆಗೆ ದಿನಾಂಕ ನಿಗದಿಪಡಿಸಿತು.