ಟೆಹರಾನ್ (ಇರಾನ್): ಉತ್ತರ ಟೆಹರಾನ್ನ ವೈದ್ಯಕೀಯ ಚಿಕಿತ್ಸಾಲಯವೊಂದರಲ್ಲಿ ಅನಿಲ ಸೋರಿಕೆಯಿಂದ ಸ್ಫೋಟ ಸಂಭವಿಸಿ 13 ಜನರು ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ ಆರು ಮಂದಿ ಗಾಯಗೊಂಡಿದ್ದಾರೆ ಎಂದು ಇರಾನ್ನ ಮಾಧ್ಯಮ ವರದಿ ಮಾಡಿದೆ.
ಸ್ಫೋಟದಲ್ಲಿ 10 ಪುರುಷರು ಮತ್ತು ಮೂವರು ಮಹಿಳೆಯರು ಸಾವನ್ನಪ್ಪಿದ್ದಾರೆ ಎಂದು ಟೆಹರಾನ್ ಪ್ರಾಸಿಕ್ಯೂಟರ್ ಅಲಿ ಅಲ್ಕಾಸಿಮೆಹ್ರ್ ಹೇಳಿದ್ದಾರೆ. ಪ್ರಾದೇಶಿಕ ಅಧಿಕಾರಿಯೊಬ್ಬರ ಪ್ರಕಾರ, ಅನಿಲ ಸೋರಿಕೆಯೇ ಈ ಘಟನೆಗೆ ಕಾರಣವಾಗಿದೆಯಂತೆ.
ಬೆಂಕಿಯ ಕೆನ್ನಾಲಗೆ ಜೋರಾಗಿದ್ದು, ಅಗ್ನಿಶಾಮಕ ದಳದವರು ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಆರು ಜನರು ಗಾಯಗೊಂಡಿದ್ದು, ಅವರನ್ನ ವೈದ್ಯಕೀಯ ಚಿಕಿತ್ಸೆಗಾಗಿ ತಾಜ್ರಿಶ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಲ್ಕಾಸಿಮೆಹ್ರ್ ಹೇಳಿದ್ದಾರೆ.
10 ಆ್ಯಂಬುಲೆನ್ಸ್‌ಗಳನ್ನು ಸ್ಥಳದಲ್ಲಿ ನಿಯೋಜನೆ ಮಾಡಲಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಗಾಯಾಳುಗಳು ಕಂಡು ಬಂದಲ್ಲಿ ಅವರನ್ನ ಹತ್ತಿರದ ಆಸ್ಪತ್ರೆಗೆ ರವಾನಿಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಘಟನಾ ಸ್ಥಳದ ಸುತ್ತ ಎಲ್ಲ ರಸ್ತೆಗಳನ್ನ ಬಂದ್ ಮಾಡಿದ್ದರು.
ಚಿಕಿತ್ಸಾಲಯದಲ್ಲಿ ಉಳಿದ ಜನರನ್ನು ಹತ್ತಿರದ ಕಟ್ಟಡಗಳಿಗೆ ಸ್ಥಳಾಂತರಿಸುವ ಪ್ರಯತ್ನ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವೈದ್ಯಕೀಯ ಕೇಂದ್ರದಲ್ಲಿ ಹೆಚ್ಚು ಆಮ್ಲಜನಕ ಟ್ಯಾಂಕ್‌ಗಳು ಉಳಿದಿರುವ ಕಾರಣ ಇನ್ನೂ ಹೆಚ್ಚಿನ ಸ್ಫೋಟಗಳು ಸಂಭವಿಸಬಹುದು ಎಂದು ಅಲ್ಲಿನ ಮಾಧ್ಯಮ ಹೇಳಿವೆ.