ದೆಹಲಿ: ಸೆಪ್ಟಂಬರ್ 14 ರಂದು ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆ ದೆಹಲಿಯ ಸಫ್ತರ್ಜಂಗ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.
ಚಂದಪಾ ಪೊಲೀಸ್ ಠಾಣೆ ಪ್ರದೇಶದಲ್ಲಿ ಯುವತಿ ಮೇಲೆ ಸೆಪ್ಟಂಬರ್ 14 ರಂದು ಸಾಮೂಹಿಕ ಅತ್ಯಾಚಾರ ನಡೆದಿತ್ತು. ಅತ್ಯಾಚಾರದ ನಂತರ, ಕಾಮುಕರು ಆಕೆಯ ಮೇಲೆ ಹಲ್ಲೆ ಮಾಡಿದ್ದರು. ಯುವತಿಯನ್ನು ಚಿಕಿತ್ಸೆಗಾಗಿ ಅಲಿಘಡ್ನ ಜೆ ಎನ್ ಮೆಡಿಕಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ನಿನ್ನೆ, ಸಂತ್ರಸ್ತೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಸಫ್ತರ್ಜಂಗ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಸೆಪ್ಟಂಬರ್ 14 ರಂದು ಈ ಘಟನೆ ನಡೆದಿದ್ದು, ತನ್ನ ತಾಯಿಯೊಂದಿಗೆ ಹೊಲಕ್ಕೆ ಹೋದಾಗ 4-5 ಜನ ದುರುಳರು ಸಾಮೂಹಿಕ ಅತ್ಯಾಚಾರವೆಸಗಿ ಬರ್ಬರವಾಗಿ ಹಲ್ಲೆ ನಡೆಸಿದ್ದರು.
ಯುವತಿಯ ಶವವನ್ನು ಸಂಜೆಯ ವೇಳೆಗೆ ಗ್ರಾಮಕ್ಕೆ ತರಲಾಗುವುದು, ನಂತರ ಅಂತ್ಯಕ್ರಿಯೆಯನ್ನು ಗ್ರಾಮದಲ್ಲಿಯೇ ಮಾಡಲಾಗುತ್ತದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.