ಜೈಪುರದಲ್ಲಿ ತಯಾರಾಗುವ ಕೃತಕ ಕಾಲುಗಳು ವಿಶ್ವ ಪ್ರಸಿದ್ಧವಾಗಿದ್ದು, ಈ ಜೈಪುರ ಫೂಟ್ಗಳು ಭಾರತ ಸೇರಿದಂತೆ ದೇಶದ ಇತರ 32 ದೇಶಗಳ 1.8 ಮಿಲಿಯನ್ ವಿಕಲ ಚೇತನರಿಗೆ ನೆರವಾಗಿದೆ. ಇದು ಗಾಂಧೀಜಿಯವರ ಗ್ರಾಮೀಣ ಕರಕುಶಲ ಇಂಜಿನಿಯರಿಂಗ್ಗೆ ಸಾಕ್ಷಿಯಾಗಿದೆ. ಮಿತವ್ಯಯದ ಮೂಲಕ ಅಧಿಕ ಲಾಭ ಪಡೆಯುವುದಾಗಿದೆ ಎಂದು ಭಾರತದ ವಿಜ್ಞಾನಿ ಡಾ. ಆರ್ ಎಮ್ ಮಶೇಲ್ಕರ್ ಹೇಳುತ್ತಾರೆ.
'ಜೈಪುರ್ ಫೂಟ್' ಕಡಿಮೆ ವೆಚ್ಚದ್ದಾಗಿದ್ದು, ತಂತ್ರಜ್ಞಾನದಲ್ಲಿ ಮುಂದಿದೆ. ಭಗವಾನ್ ಮಹಾವೀರ ವಿಕಲಾಂಗ ಸಹಾಯ ಸಮಿತಿಯು ಈ ಕೃತಕ ಕಾಲನ್ನು ಆವಿಷ್ಕರಿಸಿದೆ. 4,100 ರೂಪಾಯಿಗೆ ಲಭ್ಯವಾಗುವ ಇದು ವಿಕಲಚೇತನರನ್ನು ಘನತೆಯಿಂದ ನಡೆಯುವಂತೆ ಮಾಡುತ್ತದೆ.
ಭಗವಾನ್ ಮಹಾವೀರ ವಿಕಲಾಂಗ ಸಹಾಯ ಸಮಿತಿಯ (ಬಿಎಮ್ವಿಎಸ್ಎಸ್) ಸ್ಥಾಪಕ ದೇವೇಂದ್ರ ರಾಜ್ ಮೆಹ್ತಾ ಸಮಾಜ ಸೇವಕರಾಗಿದ್ದರು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಡೆಪ್ಯುಟಿ ಗವರ್ನರ್ ಹಾಗೂ ಸೆಕ್ಯುರಿಟೀಸ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾದ ಸ್ಥಾಪಕ ಅಧ್ಯಕ್ಷರಾಗಿರಾಗಿಯೂ ಸೇವೆ ಸಲ್ಲಿಸಿದ್ದರು.
ದೇವೇಂದ್ರ ರಾಜ್ ಮೆಹ್ತಾ ಅವರ ಕುಟುಂಬಸ್ಥರು ಗಾಂಧಿ ತತ್ತ್ವವನ್ನು ಪಾಲಿಸುತ್ತಿದ್ದರು. ದಿವ್ಯಾಂಗರ ನೆರವಿಗಾಗಿಯೇ ಭಗವಾನ್ ಮಹಾವೀರ ವಿಕಲಾಂಗ ಸಹಾಯ ಸಮಿತಿಯನ್ನು ಅವರು ಸ್ಥಾಪಿಸಿದ್ದರು.
"ಗಾಂಧೀಜಿಯವರ ಪ್ರಾರ್ಥನಾ ಸಭೆಗಳಲ್ಲಿ ಹಾಡಲಾಗುತ್ತಿದ್ದ 'ವೈಷ್ಣವ ಜನತೋ ತೇನೆ ಕಹಿಯೇ, ಜೊ ಪೀರ್ ಪರಯೇ ಜಾನೇ ರೇ' ಎಂಬ ಪ್ರಾರ್ಥನಾ ಗೀತೆಯಿಂದ ನಾನು ಪ್ರೇರೇಪಿತನಾಗಿದ್ದೆ. ಗಾಂಧಿ ತತ್ವದ ಪ್ರೇರಣೆಯಿಂದಲೇ ಈ ಸಮಿತಿಯನ್ನು ನಾನು ಸ್ಥಾಪಿಸಿದ್ದೇನೆ. ಇದರ ಮೂಲಕ ದಿವ್ಯಾಂಗರ ಸಮಸ್ಯೆಗಳಿಗೆ ಸ್ಪಂದಿಸುತ್ತೇವೆ. 20ನೇ ಶತಮಾನದಲ್ಲಿ ಭಾರತಕ್ಕೆ ಸಿಕ್ಕ ಅತಿ ದೊಡ್ಡ ಉಡುಗೊರೆಯೆಂದರೆ ಮಹಾತ್ಮಾ ಗಾಂಧೀಜಿ" ಎಂದು ದೇವೇಂದ್ರ ರಾಜ್ ಮೆಹ್ತಾ ಹೇಳುತ್ತಾರೆ.
ಜೈಪುರದ ಕೃತಕ ಕಾಲುಗಳು ಸ್ಥಳೀಯ ಉತ್ಪಾದನೆಗಳಾಗಿದ್ದು, ಕಡಿಮೆ ಸಂಪನ್ಮೂಲಗಳಿಂದ ಅತಿ ಹೆಚ್ಚು ಪ್ರಯೋಜನ ಪಡೆಯುವ ಗುರಿ ಹೊಂದಿವೆ.
ಜೈಪುರದದ ಕುಶಲಕರ್ಮಿ ರಾಮಚಂದ್ರ ಎಂಬುವವರು ಮೊಟ್ಟ ಮೊದಲ ಜೈಪುರ ಕೃತಕ ಕಾಲುಗಳನ್ನು ತಯಾರಿಸುತ್ತಾರೆ. ಬಳಿಕ ಅವರೊಂದಿಗೆ ಮೂರು ವೈದ್ಯರು ಸೇರಿಕೊಂಡು 1968ರಲ್ಲಿ ಜಗತ್ತಿಗೆ ಕೃತಕ ಕಾಲುಗಳನ್ನು ಪರಿಚಯಿಸುತ್ತಾರೆ. 1968ರಲ್ಲಿ ಈ ಕರತಕ ಕಾಲುಗಳ ಬೆಲೆ ರೂ. 250 ಆಗಿತ್ತು. ಇದೀಗ 44 ವರ್ಷಗಳ ಬಳಿಕ 4,100 ರೂ ಬೆಲೆಯಿದೆ.
ವಿಭಿನ್ನ ತಂತ್ರಜ್ಞಾನದ ಮೂಲಕ ವಿದೇಶಗಳಲ್ಲಿ ತಯಾರಾಗುವ ಕೃತಕ ಕಾಲುಗಳಿಗೆ 10,000 ಡಾಲರ್ ಬೆಲೆಯಿರುತ್ತದೆ. ಆದರೆ ಜೈಪುರದ ಕೃತಕ ಕಾಲುಗಳು ಕೇವಲ 66 ಡಾಲರ್ಗಳಿಗೆ ಲಭ್ಯವಿದೆ ಎಂದು ಮೆಹ್ತಾ ಹೇಳುತ್ತಾರೆ.
ಭಾರತದ ವಿದೇಶಾಂಗ ಸಚಿವಾಲಯವು ತನ್ನ 150ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ "ಮಾನವೀಯತೆಗಾಗಿ ಭಾರತ" ಎಂಬ ಯೋಜನೆಯಡಿ ಜೈಪುರದ ಕೃತಕ ಕಾಲುಗಳನ್ನು ಆಯ್ಕೆ ಮಾಡಿತು.
ಮಹಾತ್ಮಾ ಗಾಂಧೀಜಿಯವರ ತತ್ತ್ವಗಳ ಆಧಾರದಲ್ಲಿ ವಿದೇಶಾಂಗ ಸಚಿವಾಲಯವು ಭಗವಾನ್ ಮಹಾವೀರ ವಿಕಲಾಂಗ ಸಹಾಯ ಸಮಿತಿಯ ಸಹಯೋಗದೊಂದಿಗೆ ಜಗತ್ತಿನಾದ್ಯಂತ ಕೃತಕ ಅಂಗ ಜೋಡಣಾ ಶಿಬಿರಗಳನ್ನು ಆಯೋಜನೆ ಮಾಡುತ್ತದೆ.
ಜೈಪುರದ ಕೃತಕ ಕಾಲುಗಳು ಭಾರತದ 600 ಜಿಲ್ಲೆಗಳಲ್ಲಿ ಹಾಗೂ ಏಷ್ಯಾ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕದ 33 ದೇಶಗಳಲ್ಲಿ ವ್ಯಾಪಿಸಿದೆ. ಆ ಮೂಲಕ ಭಾರತ ತನ್ನ ಸಹಾನುಭೂತಿಯನ್ನ ತೋರ್ಪಡಿಸುತ್ತಿದೆ. ಹೀಗೆ ಭಾರತ ಸರ್ಕಾರದ ಸಹಯೋಗದೊಂದಿಗೆ ಗಾಂಧೀಜಿಯ ತತ್ತ್ವಗಳು ವಿಯೆಟ್ನಾಂ, ಮಾಯನ್ಮಾರ್, ಇರಾಕ್, ಸೆನೆಗಲ್, ತಾಂಜೇನಿಯಾ, ಮಾಲ್ಡಾ ಹಾಗೂ ಈಜಿಪ್ಟ್ಗೆ ತಲುಪಿದ್ದು, ಅದರಿಂದ ಅಲ್ಲೆಲ್ಲ ಜನ ಪ್ರಭಾವಿತರಾಗಿದ್ದಾರೆ.
ನೆಹರೂವರ ಮಾತಿನಂತೆ, ನಾವು ಯಾವಾಗ ಜನರೊಂದಿಗೆ ಬೆರತು ಅವರ ಕಣ್ಣೀರು ಒರೆಸುತ್ತೇವೆ, ಅವನ ಅಥವಾ ಅವಳ ದುಃಖವು ಮಾಯವಾಗುತ್ತದೆ ಆಗ ಅವರು ನಗುತ್ತಿರುವ ಜೀವಿಯಾಗಿ ಅರಳುತ್ತಾರೆ. ಅದೇ ರೀತಿ ಜನರ ಕಲ್ಯಾಣಕ್ಕಾಗಿ ಗಾಂಧೀ ಹಾಕಿಕೊಟ್ಟ ಮಾರ್ಗ ಹಲವರ ಬದುಕನ್ನ ಉಜ್ವಲಗೊಳಿಸಿದ್ದಂತೂ ಸುಳ್ಳಲ್ಲ.