ಮುಂಬೈ: ಸಾಲದ ಸುಳಿಗೆ ಸಿಲುಕಿ ದಿವಾಳಿ ಅಂಚಿನಲ್ಲಿರುವ ಇನ್ಫ್ರಾಸ್ಟ್ರಕ್ಚರ್ ಲೀಸಿಂಗ್ ಆ್ಯಂಡ್ ಫಿನಾನ್ಶಿಯಲ್ ಸರ್ವೀಸಸ್ (ಐಎಲ್ ಆ್ಯಂಡ್ ಎಫ್ಎಸ್) ಕಂಪನಿಯ ಸಾಲ ವಂಚನೆ ಪ್ರಕರಣಕ್ಕೆ ಸಂಬಧಿಸಿದಂತೆ ಮಾಜಿ ಅಧ್ಯಕ್ಷ ಹರಿ ಶಂಕರನ್ ಅವರನ್ನು ಬಂಧಿಸಲಾಗಿದೆ.
ಐಎಲ್ಆ್ಯಂಡ್ಎಫ್ಎಸ್ ಹಾಗೂ ಅದರ ಸಹವರ್ತಿ ಘಟಗಳಿಗೆ ಸಂಬಂಧಿಸಿದಂತೆ ಎಸ್ಎಫ್ಐಒ ತನಿಖೆ ನಡೆಸುತ್ತಿದ್ದು, ಸಂಸ್ಥೆಯ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಅಧಿಕಾರ ದುರುಪಯೋಗ ಆಪಾದನೆ ಮೇಲೆ ಹರಿ ಶಂಕರ್ ಅವರನ್ನು ವಶಕ್ಕೆ ಪಡೆಯಲಾಗಿದೆ. ಐಎಲ್ಆ್ಯಂಡ್ಎಫ್ಎಸ್ ಈ ಹಿಂದಿನ ಕಂಪನಿಗಳ ಕಾಯ್ದೆಯ ನಿಬಂಧನೆಗಳು ಉಲ್ಲಂಘಿಸಿದೆ ಎಂದು ತನಿಖಾ ಅಧಿಕಾರಿಗಳು ಬಂಧನಕ್ಕೆ ಸ್ಪಷ್ಟನೆ ನೀಡಿದ್ದಾರೆ.
ಶಂಕರ್ ತಮ್ಮ ಅಧಿಕಾರ ಅವಧಿಯಲ್ಲಿ ಅರ್ಹತೆ ಇಲ್ಲದ ಹಾಗೂ ಅನುತ್ಪಾದಕ ಆಸ್ತಿ (ಎನ್ಪಿಎ) ಘೋಷಿಸದ ಸಂಸ್ಥೆಗಳಿಗೆ ಸಾಲವನ್ನು ನೀಡಿದ್ದರು. ಇದು ಕಂಪನಿಗೆ ಮತ್ತು ಸಾಲದಾತರಿಗೆ ಭಾರಿ ನಷ್ಟ ಉಂಟುಮಾಡಿತ್ತು. ಐಎಲ್ಆ್ಯಂಡ್ಎಫ್ಎಸ್ ವಿವಿಧ ಬ್ಯಾಂಕ್ಗಳಿಂದ ₹ 17 ಸಾವಿರ ಕೋಟಿ ಸಾಲ ಪಡೆದಿದೆ ಎಂದು ತಿಳಿಸಿದ್ದಾರೆ.
ಐಎಲ್ ಆ್ಯಂಡ್ ಎಫ್ಎಸ್ನಲ್ಲಿ ₹ 13,000 ಕೋಟಿ ಮೊತ್ತ ಬಡ್ಡಿ ಅವ್ಯವಹಾರ, ಅಸಮರ್ಪಕ ಮೌಲ್ಯಮಾಪನ ಮತ್ತು ಬ್ಯಾಂಕಿಂಗ್ ನಿಯಮಗಳ ವಿಷಯಾಂತರದಂತ ಅಕ್ರಮ ವ್ಯವಹಾರ ಎಸಗಲಾಗಿದೆ ಎಂದು ಗ್ರಾಂಟ್ ಥಾರ್ನ್ಟನ್ ಇಂಡಿಯಾ ಸಂಸ್ಥೆ ತನ್ನ ಮಧ್ಯಂತರ ವರದಿಯಲ್ಲಿ ಈ ಹಿಂದೆ ತಿಳಿಸಿತ್ತು.
ಕಳೆದ ವರ್ಷ ಕೇಂದ್ರ ಸರ್ಕಾರವು ₹ 91 ಸಾವಿರ ಕೋಟಿ ಸಾಲದಲ್ಲಿರುವ ಕಂಪನಿಯ ಆಡಳಿತ ಮಂಡಳಿಯನ್ನು ತೆಗೆದು ಹಾಕುವಂತೆ ರಾಷ್ಟ್ರೀಯ ಕಂಪನಿ ಕಾನೂನು ಪ್ರಾಧಿಕಾರಕ್ಕೆ (ಎನ್ಸಿಎಲ್ಟಿ) ಮನವಿ ಸಲ್ಲಿಸಿತ್ತು. ಸರ್ಕಾರದ ಮನವಿಯನ್ನು ಪುರಸ್ಕರಿಸಿದ ಎನ್ಸಿಎಲ್ಟಿ, ಕೋಟ್ಯಾಕ್ ಮಹೀಂದ್ರ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ/ ಸಿಇಒ ಉದಯ ಕೋಟಕ್ ಅವರ ನೇತೃತ್ವದಲ್ಲಿ ಕಂಪನಿಯನ್ನು ಪುನಶ್ಚೇತನಗೊಳಿಸಿವಂತೆ ಆರು ಸದಸ್ಯರು ಒಳಗೊಂಡ ಸಮಿತಿಯನ್ನು ರಚಿಸುವ ಆದೇಶ ಹೊರಡಿಸಿತ್ತು.