ಚೆನ್ನೈ (ತಮಿಳುನಾಡು): ಭಾರತದ ಮಾಜಿ ಕ್ರಿಕೆಟಿಗ ಲಕ್ಷ್ಮಣ ಶಿವರಾಮಕೃಷ್ಣನ್ ಬಿಜೆಪಿ ಸೇರಿದ್ದಾರೆ. ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಮತ್ತು ತಮಿಳುನಾಡು ಬಿಜೆಪಿ ಮುಖ್ಯಸ್ಥ ಎಲ್ ಮುರುಗನ್, ಶಿವರಾಮಕೃಷ್ಣನ್ ಅವರನ್ನು ಕೇಸರಿ ಪಾಳಯಕ್ಕೆ ಬರಮಾಡಿಕೊಂಡಿದ್ದಾರೆ.
ಮುಂದಿನ ವರ್ಷ ಏಪ್ರಿಲ್ - ಮೇ ತಿಂಗಳಲ್ಲಿ ತಮಿಳುನಾಡು ವಿಧಾನಸಭಾ ಚುನಾವಣೆ ನಡೆಯಲಿರುವುದರಿಂದ ಈ ಬೆಳವಣಿಗೆ ಪ್ರಾಮುಖ್ಯತೆ ಪಡೆದಿದೆ. ಮಾಜಿ ಕ್ರಿಕೆಟಿಗನೊಂದಿಗೆ, ನಟ ಪಂಜು ಅರುಣಾಚಲಂ, ಕೈಗಾರಿಕೋದ್ಯಮಿ ರಾಜಶೇಖರ್, ಎಐಎಡಿಎಂಕೆ ಐಟಿ ವಿಭಾಗದ ಜಂಟಿ ಕಾರ್ಯದರ್ಶಿ ಮತ್ತು ಅನೇಕರು ಬಿಜೆಪಿ ಸೇರಿದ್ದಾರೆ.
ಲಕ್ಷ್ಮಣ ಶಿವರಾಮಕೃಷ್ಣನ್ 1983ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದು, ಭಾರತದ ಪರವಾಗಿ 16 ಏಕದಿನ ಮತ್ತು 9 ಟೆಸ್ಟ್ ಆಡಿದ್ದರು.
ಅವರು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧ ತಮ್ಮ ಕೊನೆಯ ಏಕದಿನ ಪಂದ್ಯ ಆಡಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾದ ನಂತರ ಅವರು ಸುಮಾರು 20 ವರ್ಷಗಳಿಂದ ನಿರೂಪಕರಾಗಿದ್ದಾರೆ.