ನವದೆಹಲಿ: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕೇಂದ್ರದ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲು ಮಾಡಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು.
ಅನಾರೋಗ್ಯದ ಹಿನ್ನೆಲೆಯಲ್ಲಿ17ನೇ ಲೋಕಸಭಾ ಚುನಾವಣಾ ಕಣದಿಂದ ಅವರು ಹಿಂದೆ ಸರಿದಿದ್ದರು. ಬಿಜೆಪಿ ಪಾಲಿನ ಫೈರ್ಬ್ರ್ಯಾಂಡ್ ನಾಯಕಿ ಎಂದೇ ಗುರುತಿಸಿಕೊಂಡಿದ್ದ ಸುಷ್ಮಾ ಸ್ವರಾಜ್ ತೀವ್ರ ಅನಾರೋಗ್ಯಕ್ಕೆ ತುತ್ತಾಗಿರುವ ಕಾರಣಕ್ಕೆ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದರು. ಮೂತ್ರ ಪಿಂಡ ವೈಫಲ್ಯದ ಕಾರಣ ವಿದೇಶಾಂಗ ಇಲಾಖೆ ಸಚಿವೆಯಾಗಿದ್ದಾಗಲೇ ಸುಷ್ಮಾ ಸ್ವರಾಜ್ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಈಗ ಅನಾರೋಗ್ಯದ ಕಾರಣ ದೆಹಲಿಯ ಏಮ್ಸ್ ಆಸ್ಪತ್ರೆಗೆ ಅವರನ್ನ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಿಸದೇ ಅವರು ಇಹಲೋಕ ತ್ಯಜಿಸಿದ್ದಾರೆ.
ಏಮ್ಸ್ ಆಸ್ಪತ್ರೆಗೆ ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಹಾಗೂ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಭೇಟಿ ಮಾಡಿ ಅವರ ಆರೋಗ್ಯ ಮಾಹಿತಿ ಪಡೆದುಕೊಂಡಿದ್ದರು. ತುರ್ತು ನಿಗಾ ಘಟಕದಲ್ಲಿ ಐವರು ವೈದ್ಯರ ನೇತೃತ್ವದ ತಂಡ ಅವರಿಗೆ ಚಿಕಿತ್ಸೆ ನೀಡುತ್ತಿತ್ತು.ಆದರೆ, ಕೊನೆಗೂ ಚಿಕಿತ್ಸೆ ಫಲಕಾರಿಯಾಗದೇ ಸುಷ್ಮಾ ಸ್ವರಾಜ್ ಸಾವನ್ನಪ್ಪಿದ್ದಾರೆ.
ಏಳು ಬಾರಿ ಸಂಸದೆಯಾಗಿ, ಮೂರು ಸಲ ವಿಧಾನ ಸಭಾ ಸದಸ್ಯೆಯಾಗಿ ಆಯ್ಕೆಗೊಂಡಿದ್ದ ಇವರು, 1977ರಲ್ಲಿ ಉತ್ತರ ಭಾರತದ ಹರಿಯಾಣ ರಾಜ್ಯದ ಸಂಪುಟ ಸಚಿವೆ ಕೂಡ ಆಗಿದ್ದರು.
1959ರ ಫೆಬ್ರುವರಿ 14ರಂದು ಹರಿಯಾಣದ ಅಂಬಾಲಾ ಕ್ಯಾಂಟ್ನಲ್ಲಿ ಹಾರ್ದೇವ್ ಶರ್ಮಾ ಮತ್ತು ತಾಯಿ ಲಕ್ಷ್ಮಿ ದೇವಿ ಅವರ ಮಗಳಾಗಿ ಇವರು ಜಸಿಸುತ್ತಾರೆ. ಅಂಬಾಲಾ ಕಂಟೋನ್ಮೆಂಟ್ನ ಸನಾತನ ಧರ್ಮ ಕಾಲೇಜಿನಲ್ಲಿ ಸಂಸ್ಕೃತ ಮತ್ತು ರಾಜ್ಯಶಾಸ್ತ್ರ ವಿಷಯಗಳಲ್ಲಿ ಪದವಿ, ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಕಾನೂನು ಅಭ್ಯಾಸ ಹಾಗೂ 1973ರಲ್ಲಿ ಭಾರತದ ಸುಪ್ರೀಂಕೋರ್ಟ್ನಲ್ಲಿ ವಕೀಲರಾಗಿ ಅಭ್ಯಾಸ ಆರಂಭಿಸಿದರು.
1970ರಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ನೊಂದಿಗೆ ಇವರ ರಾಜಕೀಯ ಜೀವನ ಆರಂಭಗೊಳ್ಳುತ್ತದೆ. ಪತಿ ಸ್ವರಾಜ್ ಕೌಶಲ್, ಸಮಾಜವಾದಿ ನಾಯಕ ಜಾರ್ಜ್ ಫರ್ನಾಂಡಿಸ್ನವರೊಂದಿಗೆ ನಿಕಟ ಸಂಬಂಧ ಹೊಂದಿದ್ದರು. 1977ರಿಂದ 1982ರವರೆಗೆ ಹರಿಯಾಣ ವಿಧಾನಸಭೆಯ ಸದಸ್ಯರಾಗಿದ್ದರು. 25ನೇ ವಯಸ್ಸಿನಲ್ಲಿ ಅಂಬಾಲಾ ಕಂಟೋನ್ಮೆಂಟ್ ಶಾಸನ ಸಭೆಗೆ ಅವಕಾಶ ಪಡೆದರು.