ನವದೆಹಲಿ: ಭಾರತದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳಿಗೆ ಧಕ್ಕೆಯಾಗ್ತಿದೆ ಎಂಬ ಅಮೆರಿಕದ ವರದಿಗೆ ಭಾರತ ಸರ್ಕಾರ ಕಿಡಿಕಾರಿದೆ. ಭಾರತದ ಪ್ರಜಾಪ್ರಭುತ್ವವನ್ನು ಪ್ರಶ್ನಿಸುವ ಅಧಿಕಾರ ವಿದೇಶಿ ಸರ್ಕಾರಗಳಿಗಿಲ್ಲ ಎಂದು ಖಡಕ್ಕಾಗಿ ಹೇಳಿದೆ.
ವಿದೇಶಾಂಗ ಇಲಾಖೆಯ ವಕ್ತಾರ ರವೀಶ್ ಕುಮಾರ್ ಮಾತನಾಡಿ, ಭಾರತದ ಪ್ರಜಾಪ್ರಭುತ್ವ ಹಾಗೂ ಕಾನೂನುಗಳ ಬಗ್ಗೆ ಟೀಕೆ ಮಾಡುವ ಅಧಿಕಾರ ವಿದೇಶಿ ಸರ್ಕಾರಗಳಿಗಿಲ್ಲ. ಸಾಂವಿಧಾನಿಕವಾಗಿ ರಕ್ಷಿಸಲ್ಪಟ್ಟ ಜನರ ಹಕ್ಕುಗಳ ಬಗ್ಗೆ ಅವು ಮಾತನಾಡುವಂತೂ ಇಲ್ಲ ಎಂದು ಹೇಳಿದ್ದಾರೆ.
ಭಾರತವೊಂದು ಪ್ರಖರ ಪ್ರಜಾಪ್ರಭುತ್ವ ರಾಷ್ಟ್ರ. ಇಲ್ಲಿ ಧಾರ್ಮಿಕ ಸ್ವಾತಂತ್ರ್ಯವನ್ನು ಸಂವಿಧಾನದ ಮೂಲಕ ರಕ್ಷಿಸಲಾಗಿದೆ. ಆಡಳಿತ ಹಾಗೂ ಕಾನೂನುಗಳ ಮೂಲಕ ಮೂಲಭೂತ ಹಕ್ಕುಗಳನ್ನು ಎತ್ತಿಹಿಡಿಯಲಾಗುತ್ತಿದೆ ಎಂಬುದು ಎಲ್ಲರಿಗೂ ಗೊತ್ತು. ನಾವು ಸಹಿಷ್ಣುತೆಗೆ ಬದ್ಧರಾಗಿದ್ದೇವೆ ಎಂದು ಪ್ರತಿಪಾದಿಸಿದ್ದಾರೆ.
ನಿನ್ನೆ, 'ರಿಪೋರ್ಟ್ ಆನ್ ಇಂಟರ್ನ್ಯಾಷನಲ್ ರಿಲೀಜಿಯಸ್ ಫ್ರೀಡಂ 2018' ಮಂಡಿಸಿದ ಅಮೆರಿಕ, ಭಾರತದಲ್ಲಿ ಅಲ್ಪಸಂಖ್ಯಾತರ ಮೇಲೆ ಹಿಂದೂ ತೀವ್ರವಾದಿಗಳಿಂದ ದಾಳಿಯಾಗುತ್ತಿದೆ ಎಂದು ಹೇಳಿತ್ತು.